ಬೆಂಗಳೂರು: ಪುತ್ತೂರು ತಾಲೂಕಿನ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟುವಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಗುರಿಪಡಿಸಿ ಎಬಿವಿಪಿ ಕಾರ್ಯಕರ್ತರಿಂದ ಕಳೆದ ಒಂದು ವಾರದಲ್ಲಿ ನಾಲ್ಕು ಬಾರಿ ಹಲ್ಲೆ ನಡೆದಿರುವುದನ್ನು ಪ್ರಶ್ನಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಲು ಆಗ್ರಹಿಸಿ ವಿದ್ಯಾರ್ಥಿ ನಾಯಕರಾದ ಸವಾದ್ ಕಲ್ಲರ್ಪೆ ನೇತೃತ್ವದಲ್ಲಿ ಪುತ್ತೂರು ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿರುವುದನ್ನು ನೆಪವಾಗಿರಿಸಿಕೊಂಡು ಪ್ರಕರಣ ದಾಖಲಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ನ್ಯಾಯದ ಧ್ವನಿಗಳನ್ನು ಬೆದರಿಸುವ ಷಡ್ಯಂತ್ರವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಅಟ್ಟಹಾಸ ಮಿತಿಮೀರುತ್ತಿದ್ದು, ಇದರ ಭಾಗವಾಗಿ ಪುತ್ತೂರು ಕಾಲೇಜಿನ ಎಬಿವಿಪಿ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಛೂ ಬಿಡಲಾಗುತ್ತಿದೆ. ನಂತರ ಸತತವಾಗಿ ನಾಲ್ಕು ಬಾರಿ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕಾಗಿ ವಿದ್ಯಾರ್ಥಿ ನಾಯಕನ ಮೇಲೆ ಪ್ರಕರಣ ದಾಖಲಿಸುವ ಮೂಲಕ ಸಂಘಪರಿವಾರದ ಅಕ್ರಮಗಳಿಗೆ ಪೋಲಿಸ್ ಇಲಾಖೆ ಕೈ ಜೋಡಿಸಿರುವುದು ಸ್ಪಷ್ಟವಾಗುತ್ತಿದೆ. ದೌರ್ಜನ್ಯ, ದಬ್ಬಾಳಿಕೆಯ ಮೂಲಕ ಕಾಲೇಜ್ ಕ್ಯಾಂಪಸ್ ಗಳಲ್ಲಿ ಭಯದ ವಾತಾವರಣವನ್ನು ಸೃಷ್ಠಿಸಿ, ವಿದ್ಯಾ ಕೇಂದ್ರಗಳನ್ನು ಕೋಮು ಧ್ರುವೀಕರಣಗೊಳಿಸುವ ಪ್ರಯೋಗಶಾಲೆಯನ್ನಾಗಿಸಿಕೊಂಡು ಅನೈತಿಕವಾಗಿ ಗೂಂಡಾಗಿರಿ ನಡೆಸುವ ಸಂಘಪರಿವಾರದ ಅಪರಾಧ ಕೃತ್ಯಗಳ ವಿರುದ್ಧ ದ್ವನಿ ಎತ್ತಿದ ಕಾರಣಕ್ಕೆ ವಿದ್ಯಾರ್ಥಿ ನಾಯಕನ ಮೇಲೆ ಕೇಸು ದಾಖಲಾಗಿದೆ. ಸುಳ್ಳು ಕೇಸುಗಳನ್ನು ದಾಖಲಿಸಿ ನ್ಯಾಯದ ಧ್ವನಿಗಳನ್ನು ದಮನಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಉಗ್ರ ಹೋರಾಟವನ್ನು ನಡೆಸುತ್ತೇವೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.