ಕುಂದಾಪುರ: 7 ದಿನದ ನವಜಾತ ಹೆಣ್ಣು ಶಿಶುವನ್ನು ಕುಂದಾಪುರದ ವಾರಾಹಿ ಸೇತುವೆಯ ಬಳಿ ಎಸೆದು ಹೋದ ಮನಕಲುಕುವ ಘಟನೆ ನಡೆದಿದೆ. ಮಗುವನ್ನು ಬಿಸಾಡಿ ಹೋದ ಕಟುಕ ದಂಪತಿಯನ್ನು ಅಮಾಸೆಬೈಲು ಪೊಲೀಸರು ನಿನ್ನೆ ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳನ್ನು ಹೆಬ್ರಿ ಸಮೀಪದ ಕುಚ್ಚೂರು ಎಸ್ಟೇಟ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೈಂದೂರು ತಾಲೂಕು ಜಡ್ಕಲ್ ಸಮೀಪದ ಮುದೂರು ಗ್ರಾಮದ ಸತೀಶ ಪೂಜಾರಿ(43) ಮತ್ತು ರಾಧಿಕ (40) ದಂಪತಿ.
ಆರೋಪಿತ ಇಬ್ಬರಿಗೂ ಕೂಡ ಈ ಹಿಂದೆ ಮದುವೆಯಾಗಿತ್ತು. ಅದಾದ ನಂತರ ಇಬ್ಬರೂ ಸಂಸಾರದಿಂದ ದೂರವಾಗಿದ್ದಾರೆ.
ಸತೀಶ ಪೂಜಾರಿಯ ಹೆಂಡತಿ ಮಕ್ಕಳು ಅವರನ್ನು ತೊರೆದು ಹೋಗಿದ್ದರು. ರಾಧಿಕ ಅವಳ ಗಂಡ ಡೈವರ್ಸ್ ನೀಡಿದ್ದರಿಂದ ದೂರವಾಗಿದ್ದರು.
ಹೀಗಿರುವಾಗ ಕೆಲಸ ಮಾಡುವ ಸ್ಥಳದಲ್ಲಿ ಅವರ ನಡುವೆ ಪರಸ್ಪರ ಸ್ನೇಹ ಬೆಳೆದು, ಕಳೆದ ಒಂದು ವರ್ಷದ ಹಿಂದೆ ಯಾರಿಗೂ ಹೇಳದೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿರುವ ಬಗ್ಗೆ ತನಿಖೆಯ ವೇಳೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಧಿಕ ಗರ್ಭಿಣಿಯಾಗಿದ್ದು, ಹಾಲಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.
ಮಗು ಬೇಡ ಎಂದು ತೀರ್ಮಾನಿಸಿದ ಇಬ್ಬರು ಮಗುವನ್ನು ಕೈ ಚೀಲದಲ್ಲಿ ಹಾಕಿಕೊಂಡು ಬೈಕಿನಲ್ಲಿ ಬಂದು ಪೊದೆಗೆ ಎಸೆದು ಹೋಗಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ತನಿಖೆಯ ತಂಡಕ್ಕೆ ಒಂದಿಷ್ಟು ಪುರಾವೆಗಳು ಸಿಕ್ಕಿದ್ದವು.
ದ್ವಿಚಕ್ರ ವಾಹನದಲ್ಲಿ ಬಂದ ಪುರುಷ ಹಾಗೂ ಮಹಿಳೆ ಮಗು ಎಸೆದಿರಬಹುದೆಂಬ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಮೂಲಕ ಸಾಗಿದ ತನಿಖೆ ಸಿಸಿ ಟಿವಿ ದೃಶ್ಯಾವಳಿ, ಕೆಲವು ತಾಂತ್ರಿಕ ಸಾಕ್ಷ್ಯಗಳ ಮೂಲಕ ಸಾಗಿದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ.