dtvkannada

ಬೆಳ್ತಂಗಡಿ; ಉಜಿರೆ ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ಕೇಂದ್ರದ ‘ಡಿಪಾರ್ಟ್ಮೆಂಟ್ ಆಫ್ ಕೆಮಿಸ್ಟ್ರಿ’ಯಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ನಫೀಸತ್ ಪಿ. ಚಾರ್ಮಾಡಿ ಅವರು ಮಂಡಿಸಿದ “Synthetic and Biological Studies on Some Novel Simple and Fused Five and Six Member Heterocycles” ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.



ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ಸಿ.ಕೆ.ಹಂಝ ಮತ್ತು ಸಯ್ಯಿದತ್ ಝೈನಬಾ ಬೀವಿಯ ತೃತೀಯ ಮಗಳಾಗಿ ಜನಿಸಿದ ನಫೀಸತ್ ತನ್ನ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಚಾರ್ಮಾಡಿಯಲ್ಲಿ ಮುಗಿಸಿ, ಉಜಿರೆ ಎಸ್.ಡಿ.ಎಂ.ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು.

ಉಜಿರೆ ಎಸ್.ಡಿ.ಎಂ.ಕಾಲೇಜಿನಿಂದ ಬಿ.ಎಸ್ಸಿ.ಹಾಗೂ ಸುರತ್ಕಲ್ ಎನ್ಐಟಿಕೆಯಿಂದ ಎಂಎಸ್ಸಿ ಪದವಿಗಳನ್ನು ಡಿಸ್ಟಿಂಕ್ಷನ್ ನೊಂದಿಗೆ ಪಡೆದ ಇವರು 2017 ರಲ್ಲಿ K-SET ಅನ್ನೂ ಗಳಿಸಿದ್ದಾರೆ.

ಇದೀಗ ಮಂಗಳೂರು ವಿಶ್ವವಿದ್ಯಾನಿಲಯದ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ್ ಪ್ರಸಾದ್ ಡಿ.ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ‘ಡಾಕ್ಟರ್ ಆಫ್ ಫಿಲಾಸಫಿ’ (ಪಿ.ಎಚ್.ಡಿ) ಪದವಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಅರವತ್ತಕ್ಕೂ ಮಿಕ್ಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಭಾಗವಹಿಸಿದ ಡಾ. ನಫೀಸತ್, ಅನೇಕ ವೇದಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ವಿದ್ವತ್ ವಲಯದ ಗಮನ ಸೆಳೆದಿದ್ದಾರೆ. ಇವರು ತನ್ನ ವಿಶಿಷ್ಟ ಶೈಲಿಯ ವಿಷಯ ಮಂಡನೆಗಾಗಿ ಹಲವು ಪ್ರಶಸ್ತಿ-ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ.

ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೇರಣಾ ಭಾಷಣಕಾರರು ಮತ್ತು ಶೈಕ್ಷಣಿಕ ಸಲಹೆಗಾರರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.

ಉದ್ಯಮಿಯಾಗಿರುವ ಪತಿ ಎಸ್.ಎಂ.ಅಬ್ದುಲ್ ಖಾದರ್ ಮತ್ತು ಮಗ ಮುಹಮ್ಮದ್ ಮಿಶಾಲ್ ಜತೆ ಚಾರ್ಮಾಡಿಯಲ್ಲಿ ವಾಸಿಸುವ ಇವರು ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಶೈಕ್ಷಣಿಕವಾಗಿ ಅಧ್ಬುತ ಸಾಧನೆ ಮಾಡುವ ಮೂಲಕ ಯುವತಲೆಮಾರಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!