ಪುತ್ತೂರು: ಸುಳ್ಯಪದವು-ಕೌಡಿಚಾರು ರಸ್ತೆಯಲ್ಲಿ ದಿನನಿತ್ಯ ನೂರಾರು ಕಲ್ಲಿನ ಲಾರಿಗಳು ಅತಿವೇಗದಿಂದ ಚಲಿಸುತ್ತಿದ್ದು, ಇತ್ತೀಚೆಗೆ ಹಲವಾರು ಅಪಘಾತ ಪ್ರಕರಣಗಳು ಸಂಭವಿಸಿದೆ. ದಿನಾಂಕ 3/12/2021 ರಂದು ಕೊಯಿಲದಲ್ಲಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು ಲಾರಿಯು ಪ್ರಪಾತಕ್ಕೆ ಬಿದ್ದಿದ್ದು ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಇದನ್ನು ಮನಗಂಡು ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿ ಕೊರೆಯ ಯೂನಿಯನ್ ಹಾಗೂ ಲಾರಿ ಚಾಲಕರ ಬೇಜವಾಬ್ದಾರಿಯ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಯೂನಿಯನ್ ಮುಖಂಡರನ್ನು ಸ್ಥಳಕ್ಕೆ ಕರೆಸಿ ಮಾತುಕತೆ ನಡೆಸಲಾಯಿತು. ಶಾಲಾ ವಲಯದಲ್ಲಿ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸುವುದು, ರಸ್ತೆ ಉಬ್ಬು ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡುವುದು, ಅತಿವೇಗದಿಂದ ಚಲಾಯಿಸುವ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಯೂನಿಯನ್ ಮುಖಂಡರು ನೀಡಿದರು.
ರಸ್ತೆ ಉಬ್ಬು ನಿರ್ಮಿಸುವವರೆಗೂ ಬೆಳಿಗ್ಗೆ 8.30 ರಿಂದ 10 ಗಂಟೆ ಹಾಗೂ ಸಂಜೆ 4 ರಿಂದ 5 ಗಂಟೆಯವರೆಗೆ ಈ ರಸ್ತೆಯಲ್ಲಿ ಕಲ್ಲಿನ ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಭಂದಿಸಬೇಕೆಂಬ ಸಾರ್ವಜನಿಕರ ಒಮ್ಮತದ ಅಪೇಕ್ಷೆಯನ್ನು ಯೂನಿಯನ್ ನಾಯಕರು ಒಪ್ಪಿಕೊಂಡ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ನಂತರ ಸಾರ್ವಜನಿಕರ ಬೇಡಿಕೆಗಳನ್ನು ಲಿಖಿತವಾಗಿ ಪುತ್ತೂರು ಗ್ರಾಮಾಂತರ ಠಾಣಾಧಿಕಾರಿ, ಗ್ರಾಮ ಪಂಚಾಯತ್ ಬಡಗನ್ನೂರು ಹಾಗೂ ಈಶ್ವರಮಂಗಲ ಹೊರಠಾಣೆ ಯ ಅಧಿಕಾರಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಡಗನ್ನೂರು ಪಂಚಾಯತ್ ಜನಪ್ರತಿನಿಧಿಗಳು,ರಾಜಕೀಯ ಸಾಮಾಜಿಕ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಈಶ್ವರಮಂಗಲಹೊರಠಾಣೆ ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.