ಉಪ್ಪಿನಂಗಡಿ: ಉಪ್ಪಿನಂಗಡಿಯ ಉಜಿರೆಬೆಟ್ಟು ಎಂಬಲ್ಲಿರುವ ಮುಹಿಯದ್ದೀನ್ ಮತ್ತು ಬೀಫಾತಿಮ ಎಂಬವರ ನಾಲ್ವರು ಮಕ್ಕಳು ಜೊತೆಜೊತೆಯಾಗಿ ಧಾರ್ಮಿಕ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಸನದ್ ಬಿರುದು ಸ್ವೀಕರಿಸಿ ಅನೇಕರಿಗೆ ಮಾದರಿಯಾಗಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕಾಲೇಜಿನಲ್ಲಿ ಒಂದೇ ಮನೆಯ ನಾಲ್ವರು ಸಹೋದರರು ಒಂದೇ ದಿನ ಪದವಿ ಪಡೆದು ಸನದ್ ಬಿರುದು ಸ್ವೀಕರಿಸಿದ್ದಾರೆ.
ಉಪ್ಪಿನಂಗಡಿ ಸಮೀಪದ ಉಜಿರೆಬೆಟ್ಟು ನಿವಾಸಿ ಮುಹಿಯದ್ದೀನ್ ಮುಸ್ಲಿಯಾರ್ ಮತ್ತು ಬೀಫಾತಿಮಾ ದಂಪತಿಗಳ ಹನ್ನೆರಡು ಮಕ್ಕಳಲ್ಲಿ ಮಹಮ್ಮದ್ ಮಿದ್ಲಾಜ್(24), ಅಬ್ದುಲ್ ರಹಿಮಾನ್(23), ಮಹಮ್ಮದ್ ಶಾಕಿರ್(22) ಹಾಗೂ ಅಬೂಬಕರ್ ಸಿದ್ದೀಕ್(21) ಎಂಬವರು ಈ ವರ್ಷ ಜಾಮಿಅ ಸಅದಿಯಾ ಧಾರ್ಮಿಕ ವಿದ್ಯಾಸಂಸ್ಥೆ ಕೇರಳದಲ್ಲಿ “ಸಅದಿ” ಪದವಿ ಪಡೆದವರು.
ಮಹಮ್ಮದ್ ಮಿದ್ಲಾಜ್ ಮತ್ತು ಅಬ್ದುಲ್ ರಹಿಮಾನ್ ರವರು ಸುಳ್ಯ ಮುದರ್ರಿಸ್ ಶರಫುದ್ದೀನ್ ಸಅದಿ ರವರ ಬಳಿ ಹಾಗೂ ಮಹಮ್ಮದ್ ಶಾಕಿರ್, ಅಬೂಹಕರ್ ಸಿದ್ದೀಕ್ ಎಂಬವರು ಪೆರ್ನೆ ಅಬ್ಬಾಸ್ ಸಅದಿ ರವರ ಬಳಿ ದರ್ಸ್ ಶಿಕ್ಷಣ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಅದಿ ಕಾಲೇಜಿಗೆ ಸೇರಿದ್ದರು.
ನಾಲ್ವರು ಸಹೋದರರಿಗೂ ಒಂದೊಂದು ವರ್ಷ ವಯಸ್ಸಿನಲ್ಲಿ ವ್ಯತ್ಯಾಸವಿದ್ದರೂ ದರ್ಸ್ ಕಲಿಕೆ ಒಂದೇ ವರ್ಷದಲ್ಲಿ ಆರಂಭಿಸಿದ್ದರು. ಕುಟುಂಬದಲ್ಲಿ ಓರ್ವನನ್ನು ಧಾರ್ಮಿಕ ಪದವಿ ಓದಿಸಲು ಸಾಕಷ್ಟು ತ್ಯಾಗ ಪಡಬೇಕಾದ ಈ ಕಾಲದಲ್ಲಿ, ತನ್ನ ನಾಲ್ಕು ಮಕ್ಕಳನ್ನು ಸಅದಿ ಪದವೀದರರಾಗಿ ಸಮಾಜಕ್ಕೆ ಅರ್ಪಿಸಲು ಸಾಧ್ಯವಾದ ಆ ತಂದೆ ತಾಯಿಗೆ ನಿಜಕ್ಕೂ ಇದು ಒಂದು ಹೆಮ್ಮೆಯ ಕ್ಷಣ ಎಂದೇ ಅನ್ನಬಹುದು.