ಮಂಗಳೂರು : ‘ಕವಿತೆಯ ವಸ್ತು ಸುಲಭವೇ ಸರಳ ಅನ್ನಿಸುದರೂ ಭಾವವನ್ನು ಪಳಗಿಸುವುದು ಕಠಿಣವಾದ ಪ್ರಕ್ರಿಯೆ. ಕವಿ ಮೌನವನ್ನು ರೂಢಿಸಿಕೊಂಡಾಗ ಅವನೊಳಗೆ ಗಟ್ಟಿತನದ ಕಾವ್ಯ ಹುಟ್ಟಲು ಸಾಧ್ಯವಾಗುತ್ತದೆ. ಗುಣಮಟ್ಟದ ಬರಹಗಳಿಂದ ಸಾಹಿತಿಗಳಿಗೆ ಜನಮನ್ನಣೆ ಹಾಗೂ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಸಾಹಿತಿಗಳಿಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಹೇಳಿದರು.
ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ ಕಾವ್ಯದೀಪ ವಿಶೇಷ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
‘ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಮೇಲಿನ ಅಭಿರುಚಿಯನ್ನು ಹೆಚ್ಚಿಸುವ ಕಾರ್ಯ ನಡೆಯಬೇಕು. ಚುಸಾಪ ಸಾಹಿತ್ಯ ಸೇವೆಯ ನಿರಂತರತೆ ನಂದಾದೀಪವಾಗಿ ಬೆಳಗಲಿ’ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತ್ಯ ಸಂಘಟಕ ಗುರುಪ್ರಸಾದ್ ಕಡಂಬಾರ್ ಅವರು ಹೇಳಿದರು.
ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್ ನಾಯಕ್ ಅವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಲೇಖಕರು ತಮ್ಮ ಬರಹಗಳನ್ನು ಬೇರೆಯವರ ಬರಹಗಳ ಜೊತೆ ತುಲನೆ ಮಾಡಿಕೊಂಡಷ್ಟು ಹೊಸಹೊಸ ವಿಷಯಗಳ ಅನ್ವೇಷಣೆಯಾಗುತ್ತದೆ ಎಂದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಸಂಘಟಕರು ತಮ್ಮ ಕಾರ್ಯಕ್ರಮ ಬೇರೆಯವರ ಕಾರ್ಯಕ್ರಮದ ದಿನವೆ ನಡೆಸದೆ ಪರಸ್ಪರ ಸೌಹಾರ್ದ ಸಹಕಾರವನ್ನು ನೀಡಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಎಲ್ಲರನ್ನೂ ಒಂದೇ ಕಡೆ ಒಂದೇ ಸಮಯದಲ್ಲಿ ಸೇರಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರು.
ಹರೀಶ್ ಸುಲಾಯ ಸ್ವಾಗತಿಸಿದರು.ತಾಲೂಕು ಘಟಕದ ಕಾರ್ಯಕಾರಿ ಸದಸ್ಯ ವಿಘ್ನೇಶ್ ಭಿಡೆ ವಂದಿಸಿದರು. ಮಂಗಳೂರು ಚುಸಾಪದ ಉಪಾಧ್ಯಕ್ಷೆ ಶ್ರೀಮತಿ ಅರುಣಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಕವಿಗೋಷ್ಠಿ ಕಾವ್ಯದೀಪದಲ್ಲಿ ಕವಿಗಳಾದ
ಗೋಪಾಲಕೃಷ್ಣ ಶಾಸ್ತ್ರಿ,ಸೌಮ್ಯ ಗೋಪಾಲ್,ಮನೋಜ್ ಕುಮಾರ್,ರೇಖಾ ಸುದೇಶ್ ರಾವ್,ಅರ್ಚನಾ ಎಂ.ಬಂಗೇರಾ,ಡಾ.ವಾಣಿಶ್ರೀ, ಮಹೇಶ್ ಆರ್.ನಾಯಕ್, ರೇಮಂಡ್ ಡಿಕುನಾ ತಾಕೊಡೆ,ಮಾನಸ ಪ್ರವೀಣ್,ಹರೀಶ ಸುಲಾಯ, ಚಂದ್ರಪ್ರಭಾವತಿ,ರಶ್ಮಿ ಸನಿಲ್,ಅರುಣಾ ನಾಗರಾಜ್,
ಆಕೃತಿ ಐ ಎಸ್ ಭಟ್,ರೇಖಾ ನಾರಾಯಣ್,ಸೌಮ್ಯ ಆರ್.ಶೆಟ್ಟಿ,ವಿಘ್ನೇಶ್ ಕೆ.ಭಿಡೆ,
ವಾಣಿ ಲೋಕಯ್ಯ,ನಳಿನಾಕ್ಷಿ ಉದಯರಾಜ್,ವೆಂಕಟೇಶ್ ಗಟ್ಟಿ,ನವೀನ್ ಕುಲಾಲ್ ಚಿಪ್ಪಾರು, ಚಂದ್ರಶೇಖರ್,ಉಮೇಶ್ ಶಿರಿಯ,ವೆಂಕಟೇಶ್ ಗಟ್ಟಿ,ಸುಹಾನ ಸಯ್ಯದ್ ಮೊದಲಾದವರು ತಮ್ಮ ಸ್ವರಚಿತ ಚುಟುಕು ಹಾಗೂ ಕವನಗಳನ್ನು ವಾಚಿಸಿದರು.