ಉಪ್ಪಿನಂಗಡಿ: ಪಾಪ್ಯುಲರ್ ಫ್ರಂಟ್ ನಾಯಕರ ಅಕ್ರಮ ಬಂಧನ ವಿರೋಧಿಸಿ ಮತ್ತು ಬಂಧಿತರ ಬಿಡುಗಡೆಗಾಗಿ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬರ್ಬರವಾಗಿ ಲಾಠಿಚಾರ್ಜ್ ನಡೆಸಿದ ಉಪ್ಪಿನಂಗಡಿ ಪೊಲೀಸರ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತೀವ್ರವಾಗಿ ಖಂಡಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಸಂಜೆ 4:00 ಗಂಟೆಗೆ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆಗೆ PFI ಪುತ್ತೂರು ಕರೆ ನೀಡಿದೆ.
ಉಪ್ಪಿನಂಗಡಿಯಲ್ಲಿ ವಾರದ ಹಿಂದೆ ನಡೆದ ತಲವಾರು ದಾಳಿ ಪ್ರಕರಣ ಸಂಬಂಧಿಸಿ ಮೂವರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಬಂಧಿಸಿದ ಮೂವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ PFI ಕಾರ್ಯಕರ್ತರು ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬಂಧಿತರನ್ನು ಬಿಡುಗಡೆಗೊಳಿಸಬೇಕಾಗಿ ಪ್ರತಿಭಟನಕಾರರು ಪಟ್ಟು ಹಿಡಿದಾಗ ಬಹಳ ಸಮಯದ ನಂತರ ಒಬ್ಬರನ್ನು ಬಿಡುಗಡೆಗೊಳಿಸಿದ್ದರು.
ಆದರೆ ಉಳಿದಿಬ್ಬರು ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನೆ ಮುಂದುವರಿಸಿದಾಗ ಪೊಲೀಸರು ಯಾವುದೇ ಸೂಚನೆ ನೀಡದೇ ಯದ್ವಾತದ್ವಾ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಪ್ರತಿಭಟನಕಾರರು ಗಂಭೀರ ಗಾಯಗೊಂಡಿದ್ದಾರೆ.
ಸುಳ್ಳು ಕೇಸಿನಲ್ಲಿ ಅಮಾಯಕರನ್ನು ಸಿಲುಕಿಸುವ ಪೊಲೀಸರ ಕ್ರಮ ಖಂಡನಾರ್ಹ. ಅಮಾಯಕರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆಗೊಳಿಸಬೇಕು. ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಿದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತುಪಡಿಸಬೇಕೆಂದು ಆಗ್ರಹಿಸಿ, ಬರ್ಬರ ಲಾಠಿ ಚಾರ್ಜ್ ಘಟನೆಯನ್ನು ಖಂಡಿಸಿ ಇಂದು ಸಂಜೆ 4:00 ಗಂಟೆಗೆ ಪುತ್ತೂರಿನಲ್ಲಿ PFI ಪ್ರತಿಭಟನೆಗೆ ಕರೆ ನೀಡಿದ್ದಾರೆ.