ಬೆಂಗಳೂರು: ಆನ್ ಲೈನ್ ಮೂಲಕ ಪರಿಚಯವಾಗಿ ಮದುವೆಯಾದ ವ್ಯಕ್ತಿಯೊಬ್ಬ ಪತ್ನಿಗೆ ವಂಚಿಸಿದ ಘಟನೆ ನಡೆದಿದೆ. ಶಾದಿ ಡಾಟ್ ಕಾಮ್ನಲ್ಲಿ ಪರಿಚಯವಾಗಿ ನಂಬಿಸಿ ಮದುವೆಯಾಗಿ ಪತ್ನಿಯಿಂದಲೇ ಹಣ ದೋಚಿ ವಂಚನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಮಹಿಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ರಿಹಾನಾ ಬೇಗಂ ಮೋಸ ಹೋದ ಮಹಿಳೆ. ಶಾದಿ ಡಾಟ್ ಕಾಮ್ನಲ್ಲಿ ತಹ್ಸೀನ್ ಅಹ್ಮದ್ ಎನ್ನುವಾತನ ಪರಿಚಯವಾಗಿ ರಿಹಾನಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಮದುವೆಯ ಬಳಿಕ ತನ್ನ ಮನೆ ಕನ್ಸ್ಟ್ರಕ್ಷನ್ ನಡೆಯುತ್ತಿದೆ ಎಂದು ತಹ್ಸೀನ್ ಅಹ್ಮದ್ ಪತ್ನಿ ರಿಹಾನಾ ಮನೆಯಲ್ಲಿಯೇ ವಾಸವಾಗಿದ್ದ. ಆದರೆ ಮದುವೆಯಾಗಿ ಒಂದೇ ತಿಂಗಳಿನಲ್ಲಿ ಬ್ಯಸಿನೆಸ್ ಆರಂಭಿಸಬೇಕು ಎಂದು ಪತ್ನಿ ರಿಹಾನಾ ಬಳಿ ಹಣಕ್ಕಾಗಿ ಪೀಡಿಸಲು ಆರಂಭಿಸಿದ್ದ. ಪತಿಯ ಕಾಟ ತಾಳಲಾರದೆ ರಿಹಾನಾ 2 ಲಕ್ಷ ಹಣ 6 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ್ದಳು.
ಅದನ್ನು ತೆಗೆದುಕೊಂಡು ಮನೆಯಿಂದ ಪತಿ ನಾಪತ್ತೆಯಾಗಿದ್ದ. ಮೂರು ತಿಂಗಳಾದರೂ ಪತಿಯ ಬಗ್ಗೆ ಯಾವ ಸುಳಿವೂ ಸಿಗದ ಕಾರಣ ರಾಮಮೂರ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಬಳಿಕ ಇದೇ ರೀತಿ ತಹ್ಸೀನ್ ಅಹ್ಮದ್ ಐದಾರು ಮದುವೆಯಾಗಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ದೂರು ನೀಡಿ 2 ವರ್ಷವಾದರೂ ವಂಚಿಸಿ ನಾಪತ್ತೆಯಾದ ಪತಿಯ ಬಗ್ಗೆ ಸುಳಿವು ದೊರಕದ ಕಾರಣ ರಿಹಾನಾ ಬೇಗಂ ಇದೀಗ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.