ಸುಳ್ಯ: ಕಟ್ಟಿಂಗ್ ಮಾಡಿದ ರಬ್ಬರ್ ಮರದ ದಿಮ್ಮಿಗಳನ್ನು ಹೇರಿಕೊಂಡು ಕೇರಳದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾಗಿ ಲಾರಿಯಲ್ಲಿದ್ದ ಕಾರ್ಮಿಕರ ಪೈಕಿ ನಾಲ್ಕು ಮಂದಿ ಮೃತಪಟ್ಟ ದುರ್ಘಟನೆ ಡಿ.23ರ ಸಂಜೆ ನಡೆದಿದೆ.
ಲಾರಿ ಸುಳ್ಯದ ಕಲ್ಲಪಳ್ಳಿಯ ದೊಡ್ಡಮನೆ ಎಂಬಲ್ಲಿಯಿಂದ ಕೇರಳ ಕಡೆ ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಲಾರಿಯಲ್ಲಿದ್ದ ರಬ್ಬರ್ ಮರದ ದಿಮ್ಮಿಗಳ ಮೇಲೆ ಕಾರ್ಮಿಕರು ಕುಳಿತುಕೊಂಡಿದ್ದರು ಎಂದು ತಿಳಿದುಬಂದಿದೆ.
ಲಾರಿ ಬ್ರೇಕ್ ಫೈಲ್ ಆದ್ದರಿಂದ ಇಳಿಜಾರಿನಲ್ಲಿ ವೇಗವಾಗಿ ಚಲಿಸಿ ಕೆಳ ಭಾಗದಲ್ಲಿದ್ದ ಮನೆಗೆ ಗುದ್ದಿ ಪಲ್ಟಿಯಾಗಿ, ನಾಲ್ಕು ಮಂದಿ ಕಾರ್ಮಿಕರು ಮರದ ದಿಮ್ಮಿಗಳಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಲಾರಿಯಲ್ಲಿ ಒಟ್ಟು 9 ಮಂದಿ ಕಾರ್ಮಿಕರಿದ್ದು ಒಂದಿಬ್ಬರು ಕಾರ್ಮಿಕರು ಪಲ್ಟಿಯಾಗುವ ಸಂದರ್ಭ ಹಾರಿಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಜನರು ಸೇರಿ ಮರದ ದಿಮ್ಮಿಗಳ ನಡುವೆ ಸಿಲುಕಿದವರನ್ನು ಎತ್ತಿ ಕಾಂಞಂಗಾಡ್ ಬಳಿಯ ಕೂಡಂಗಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.