ಪ್ರೀತಿಗಾಗಿ ಕೆಲವರು ಎಂತಹ ಕೃತ್ಯವನ್ನು ಬೇಕಾದರೂ ಮಾಡುತ್ತಾರೆ. ಮದುವೆಯಾಗಿ ಗಂಡನೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡಿದ್ದ ಮಹಿಳೆಗೆ ಪರಪುರುಷನ ಗೆಳೆತನವಾಗಿತ್ತು. ಆತನೊಂದಿಗಿನ ಗೆಳೆತನ ಪ್ರೀತಿಯಾಗಿ ಮಾರ್ಪಟ್ಟಿತ್ತು. ತಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪುರುಷನ ಜೊತೆ ಇರಲು ಅಡ್ಡಪಡಿಸಿದ ತನ್ನ ಗಂಡನ ಅಪ್ಪ-ಅಮ್ಮನನ್ನು ಕೊಂದ ಮಹಿಳೆ ಅವರ ಶವಗಳನ್ನು ಸುಟ್ಟುಹಾಕಿದ್ದಾಳೆ. ಮಹಿಳೆಯ ಕಾಮದಾಸೆಗೆ ವೃದ್ಧ ದಂಪತಿ ಸುಟ್ಟು ಕರಕಲಾಗಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ವೃದ್ಧ ದಂಪತಿಯನ್ನು ಹತ್ಯೆಗೈದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಜ.1ರಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ವೃದ್ಧ ದಂಪತಿ ಶವ ಪತ್ತೆಯಾಗಿತ್ತು. ಮೃತರನ್ನು ಮಂಜಿತ್ ಸಿಂಗ್ ಮತ್ತು ಅವರ ಪತ್ನಿ ಗುರ್ಮೀತ್ ಕೌರ್ ಎಂದು ಗುರುತಿಸಲಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವೃದ್ಧ ದಂಪತಿಗಳು ತಮ್ಮ ಸೊಸೆಯ ವಿವಾಹೇತರ ಸಂಬಂಧಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗನ ಬಳಿಯೂ ಹೇಳಿದ್ದರು. ಹೀಗಾಗಿ, ತನ್ನ ಅತ್ತೆ-ಮಾವನ ಮೇಲೆ ಕೋಪಗೊಂಡಿದ್ದ ಸೊಸೆ ತನ್ನ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪ್ರಿಯಕರನ ಜೊತೆ ಸೇರಿ ಅತ್ತೆ-ಮಾವನನ್ನು ಕೊಲೆ ಮಾಡಿದ್ದಾಳೆ. ನಂತರ ಹೆಣವನ್ನು ಸುಟ್ಟು ಹಾಕಿದ್ದಾಳೆ.

ಈ ವಿಷಯ ತಿಳಿದ ಬಳಿಕ ಪೊಲೀಸರು ಆರೋಪಿ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮೃತ ದಂಪತಿಯ ಮಗ ರವೀಂದರ್ ಸಿಂಗ್ ರಾತ್ರಿ ಮನೆಗೆ ಬಂದಾಗ, ಗೇಟ್ ಒಳಗಿನಿಂದ ಲಾಕ್ ಆಗಿತ್ತು. ಮನೆಯೊಳಗೆ ಬಂದಾಗ ತನ್ನ ಹೆತ್ತವರ ಸುಟ್ಟ ಸ್ಥಿತಿಯಲ್ಲಿದ್ದ ಶವಗಳನ್ನು ಕುರ್ಚಿಗೆ ಕಟ್ಟಿದ್ದನ್ನು ನೋಡಿ ಆಘಾತಗೊಂಡಿದ್ದ.
ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದ ಆತ ಈ ಕೃತ್ಯದ ಹಿಂದೆ ತನ್ನ ಹೆಂಡತಿಯ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರು ಕದ್ದ ನಗದು ಮತ್ತು ಚಿನ್ನಾಭರಣಗಳ ಜೊತೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.
