ಹೊಸೂರು: ಇಲ್ಲಿನ ಅಣ್ಣಾನಗರದಲ್ಲಿ ತಾಯಿ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕೃತ್ಯ ಎಸಗಿಕೊಂಡ ತಾಯಿ ನೂರ್ಜಾನ್ (38) ಮತ್ತು ಮಗಳು ಮೊಸಿಂಜಾನ್ (17) ನೇಣಿಗೆ ಶರಣಾದ ನತದೃಷ್ಟರೆಂದು ತಿಳಿದು ಬಂದಿದೆ.
ಬಾರಂಡಪಲ್ಲಿಯಲ್ಲಿ ಎಲೆಕ್ಟ್ರಿಕ್ ಅಂಗಡಿ ನಡೆಸುತ್ತಿದ್ದ ಮಹಬೂಬ್ ಪಾಷ ಎಂಬವರ ಪತ್ನಿಯಾಗಿದ್ದ ನೂರ್ಜಾನ್, ರಾತ್ರಿ ಮಹಾಬೂಬ್ ಪಾಷಾ ಮನೆಯಿಂದ ಹೊರಗೆ ಹೋಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುತ್ರಿ ಮೋಸಿಂಜಾನ್ 10ನೇ ತರಗತಿವರೆಗೆ ಓದಿದ್ದು, ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದಳು. ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಸ್ಥಳಕ್ಕಾಗಮಿಸಿದ ಹೊಸೂರು ಪೊಲೀಸರು, ಮನೆಯ ಬಾಗಿಲು ಒಡೆದು ಒಳ ನುಗ್ಗಿ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪೊಲೀಸರುಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.