ವಿಟ್ಲ: ಮದುವೆ ಮನೆಯಲ್ಲಿ ಕೊರಗಜ್ಜನ ವೇಷ ತೊಟ್ಟಿದ್ದಾನೆ ಎಂಬ ನೆಪ ಮಾಡಿ ಹಿಂಜಾವೇ ಜನವರಿ 11ರಂದು ವಿಟ್ಲ ಬಂದ್ ಗೆ ಕರೆ ನೀಡಿರುವುದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಮತ್ತು ಒಂದು ನಿರ್ದಿಷ್ಟ ಧರ್ಮದ ಮೇಲಿನ ದ್ವೇಷ ಸಾಧನೆಯ ಮುಂದುವರಿದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇದರ ವಿಟ್ಲ ಡಿವಿಷನ್ ಅಧ್ಯಕ್ಷರಾದ ಶಾಫಿ ಮಾಳಿಗೆ ಹೇಳಿದ್ದಾರೆ.

ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿ ಮದುಮಗ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದಾನೆ ಮತ್ತು ಕಾನೂನಾತ್ಮಕ ತನಿಖೆಯೂ ನಡೆಯುತ್ತಿದೆ. ವಾಸ್ತವದಲ್ಲಿ ಇಂತಹ ಕಾರ್ಯಕ್ರಮಗಳಿಗೂ ಇಸ್ಲಾಮ್ ಧರ್ಮದ ಆಚಾರಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಕೂಡ ಮುಸ್ಲಿಮ್ ಮತಪಂಡಿತರು ಸ್ಪಷ್ಟಪಡಿಸಿದ್ದಾರೆ. ಇಂಥದ್ದರಲ್ಲಿ ಈ ಬಂದ್ ನ ಔಚಿತ್ಯವಾದರೂ ಏನು?
ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಿಕೊಂಡು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ವಿಟ್ಲ ಬಂದ್ ಕೂಡ ಇದೇ ಷಡ್ಯಂತ್ರದ ಭಾಗವಾಗಿದೆ. ದುರುದ್ದೇಶಪೂರಿತ ಈ ಬಂದ್ ಗೆ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು. ಬಂದ್ ನೆಪದಲ್ಲಿ ಅಹಿತಕರ ಘಟನೆಗಳು ಸಂಭವಿಸಿದರೆ ಪೊಲೀಸ್ ಇಲಾಖೆಯೇ ಇದರ ಹೊಣೆ ಹೊತ್ತುಕೊಳ್ಳಬೇಕು. ಅದೇ ರೀತಿ ಜಿಲ್ಲೆಯ ಶಾಂತಿ, ಸಾಮರಸ್ಯ ಕಾಪಾಡಲು ಪ್ರಜ್ಞಾವಂತ ನಾಗರಿಕರೂ ಈ ಬಂದ್ ವಿಫಲಗೊಳಿಸಬೇಕೆಂದು ಶಾಫಿ ಮಾಳಿಗೆ ರವರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.