ಪುತ್ತೂರು: ಉದ್ಯಮಿಯೊಬ್ಬರಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಪ್ರಕರಣ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕು, ಗೋಲ್ತಮಜಲು ಗ್ರಾಮದ ಖಲಂದರ್ ಶಾಫಿ ಹಾಗೂ ಮಂಜನಾಡಿ ಗ್ರಾಮದ ಹುಚ್ಚಿಗುಡ್ಡೆ ನಿವಾಸಿ ಹಸನಬ್ಬ ಹಸನ್ ಎಂದು ತಿಳಿದು ಬಂದಿದೆ.
ಈ ಆರೋಪಿಗಳು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯ ನಿವಾಸಿ ದರ್ಬೆಯಲ್ಲಿರುವ ನಸೀಬ್ ಬೋರ್‌ವೆಲ್ ಮಾಲಕ ಅಬೂಬಕ್ಕರ್ ಮುಲಾರ್ ಅವರಿಗೆ ಕಳೆದ ಒಂದು ವಾರಗಳಿಂದ ವಿವಿದ ಮೊಬೈಲ್ ಗಳಿಂದ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ, ಅವನನ್ನು ಬಿಡಿಸಲು ಹಣ ಬೇಕು ಅವನನ್ನು ಬಿಡಿಸಲು 13,00,000 / – ತಗಲುತ್ತದೆ . ಅವನನ್ನು ಬಿಡಿಸಲು ನೀನು ಹಣ ಕೊಡಬೇಕು , ನೀನು 2 ದಿನದ ಒಳಗೆ 3,50,000 / – ಹಣ ರೆಡಿ ಮಾಡಬೇಕು. ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರವನ್ನು ಇತರರಲ್ಲಿ ತಿಳಿಸಿದರೆ ನಿನ್ನ ಹೆಣ ಖಂಡಿತ ಬೀಳುತ್ತದೆ ನೀನು ಜೀವಂತ ಬದುಕಲು ಸಾಧ್ಯವಿಲ್ಲ ‘ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ.
ಘಟನೆ ಸಂಬಂಧ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದು, ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ . 03/2022 ಕಲಂ: 504, 506, 507, 387 ಐಪಿಸಿಯಂತ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ದಿನಾಂಕ 14-01-2022 ರಂದು ಕಾರ್ಯಾಚರಣೆ ನಡೆಸಿ, ಹಣದ ಬೇಡಿಕೆಯಿಟ್ಟ ಅಪರಿಚಿತರಿಗೆ ಉದ್ಯಮಿಯ ಮೂಲಕವೇ ಹಣದ ನೀಡುವ ಕುರಿತು ಮಾತುಕತೆ ನಡೆಸಿ ಕುರಿಯ ಸಮೀಪವೇ ಹಣ ನೀಡುವ ಸ್ಥಳ ನಿಗದಿ ಪಡಿಸಿದ್ದರು. ಹಾಗೆ ಜ.14ರಂದು ಅಪರಿಚಿತರು ಕಾರಿನಲ್ಲಿ ಬಂದು ಕುರಿಯ ಸಮೀಪ ಉದ್ಯಮಿಯಿಂದ ಹಣ ಪಡೆದು ಹೋಗುತ್ತಿದ್ದಂತೆ ಸಂಪ್ಯ ಎಸ್.ಐ ಉದಯ ರವಿ ಅವರ ನೇತೃತ್ವದ ತಂಡ ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ.
ಆರೋಪಿಗಳು ಉದ್ಯಮಿಯಿಂದ ವಸೂಲಿ ಮಾಡಿದ ರೂ 50,000/- ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿತರ ಪೈಕಿ ಖಲಂದರ್ ಶರೀಫ್ ಶಾಫಿ ಎಂಬಾತ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಹಸನಬ್ಬ ಹಸನ್ ಆಚ್ಚು ಎಂಬಾತ ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಅಲ್ಲದೆ ಇವ ಮೇಲೆ ಕಂಕನಾಡಿ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳನ್ನು ಯಶಸ್ವಿಯಾಗಿ ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಾಣೆ ಮತ್ತು ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ ಗಾನ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ರವರ ನೇತೃತ್ವದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಎಂ.ವೈ, ಅಮೀನ್ ಸಾಬ್ ಎಂ ಅತ್ತಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಪ್ಪ, ದೇವರಾಜ್, ಆದ್ರಾಮ, ಹರ್ಷಿತ್, ಗಾಯತ್ರಿ, ವಿನೋದ್ ರವರು ಭಾಗವಹಿಸಿದ್ದರು.
ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್ ದಿವಾಕರ್ ರವರು ಕಾರ್ಯಾಚರಣೆಯಲ್ಲಿ ಸಹಕರಿಸಿರುತ್ತಾರೆ .