ತನ್ನ ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಮುಂದಿನ ದಿನಗಳಲ್ಲಿ ಸಾಲು ಸಾಲು ಅಪ್ಡೇಟ್ಗಳನ್ನು ನೀಡಲು ಸಜ್ಜಾಗಿದೆ. ಈಗಾಗಲೇ ವಾಟ್ಸ್ಆ್ಯಪ್ನಲ್ಲೇ ಫೋಟೋ ಎಡಿಟಿಂಗ್, ಲಾಗೌಟ್ ಫೀಚರ್, ಸ್ಟೇಟಸ್ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಆಯ್ಕೆ ನೀಡಲು ಮುಂದಾಗಿದೆ. ಹೌದು, ವಾಟ್ಸ್ಆ್ಯಪ್ ಅಪ್ಲಿಕೇಶನ್ ಈಗ ಆಸಕ್ತಿದಾಯಕ ನವೀಕರಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ವಾಯಿಸ್ ನೋಟ್ (voice notes) ಆಯ್ಕೆಯಲ್ಲಿ ಬದಲಾವಣೆ ತರಲಿದೆ.
ವಾಟ್ಸ್ಆ್ಯಪ್ ನೂತನ ಅಪ್‌ಡೇಟ್‌ನಲ್ಲಿ ಬಳಕೆದಾರರು ಚಾಟ್ ವಿಂಡೋ ಅನ್ನು ಕ್ಲೋಸ್ ಮಾಡಿದ (ಚಾಟ್ ವಿಂಡೋದಿಂದ ಹೊರಬಂದ) ನಂತರವು, ವಾಯಿಸ್ ನೋಟ್ ಕೇಳಲು ಅನುಮತಿಸುತ್ತದೆ ಎಂದು ಹೇಳಲಾಗಿದೆ. ವಾಟ್ಸ್ಆ್ಯಪ್ ಫೀಚರ್ಸ್‌ಗಳ ಟ್ರ್ಯಾಕರ್ Wabetanino ಪ್ರಕಾರ, ಬಳಕೆದಾರರು ಬೇರೆ ಚಾಟ್‌ಗೆ ಬದಲಾಯಿಸಿದಾಗ ವಾಯಿಸ್ ನೋಟ್ ಗಳನ್ನು ಕೇಳಲು ಅನುಮತಿಸುವ ಈ ಹೊಸ ಫೀಚರ್ ಅನ್ನು ಮೂರು ತಿಂಗಳ ಹಿಂದೆ ಐಒಎಸ್ ಬೀಟಾದಲ್ಲಿ ಗುರುತಿಸಲಾಗಿದೆ ಎನ್ನಲಾಗಿದೆ.
ಈ ಫೀಚರ್ ಆಂಡ್ರಾಯ್ಡ್ ನವೀಕರಣಗಳಲ್ಲಿಯೂ ಕಾಣಿಸಿಕೊಂಡಿತ್ತು. ಈಗ ಮತ್ತೊಮ್ಮೆ ಫೀಚರ್ ಗುರುತಿಸಿದೆ. ಹಾಗೆಯೇ ಸ್ಕ್ರೀನ್‌ಶಾರ್ಟ್ ಸಹ ಹಂಚಿಕೊಂಡಿದೆ. Wabetainfo ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ, ಬಳಕೆದಾರರು ವಾಯಿಸ್ ನೋಟ್ ಕೇಳಲು ಪ್ರಾರಂಭಿಸಿದಾಗ, ಚಾಟ್‌ನಿಂದ ಹೊರಬಂದು ಇನ್ನೊಂದು ಚಾಟ್ ವಿಂಡೋವನ್ನು ತೆರೆದಾಗಲೂ, ವಾಯಿಸ್ ನೋಟ್ ಕೇಳಬಹುದಾಗಿದೆ. ಸ್ಕ್ರೀನ್‌ನ ಮೇಲ್ಭಾಗದಲ್ಲಿ ವಾಯಿಸ್ ನೋಟ್ ನಿಲ್ಲಿಸಲು pause ಬಟನ್ ಆಯ್ಕೆ ನೀಡಲಿದೆ. ಈ ಹೊಸ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ ಮತ್ತು ಅದರ ಬಗ್ಗೆ ವಾಟ್ಸ್ಆ್ಯಪ್ನಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇನ್ನು ವಾಟ್ಸ್ಆ್ಯಪ್ನಲ್ಲಿ ಈಗೀಗ ವಾಯ್ಸ್ ನೋಟ್ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಾಟ್ಸ್ಆ್ಯಪ್ ವಾಯ್ಸ್ ಮೆಸೇಜ್ ಹೇಳಿ ಕಳುಹಿಸುವ ಮುನ್ನ ಕೇಳಲು ಅವಕಾಶ ಮಾಡಿಕೊಡುವ ಆಯ್ಕೆಯನ್ನು ಕೂಡ ಅಭಿವೃದ್ದಿ ಪಡಿಸುತ್ತಿದೆ. ಸದ್ಯದಲ್ಲೇ ಈ ಫೀಚರ್ ಬಳಕೆದಾರರಿಗೆ ಸಿಗಲಿದೆಯಂತೆ. ಇದರ ಜೊತೆಗೆ ನೀವು ವಾಯ್ಸ್ ಮೆಸೇಜ್ ಕಳುಹಿಸುವಾಗ ಪಾಜ಼್ (Pause) ಮಾಡುವ ಆಯ್ಕೆ ನೀಡುವ ಫೀಚರ್ ಬಗ್ಗೆಯೂ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಅಂದರೆ ನೀವು ವಾಯ್ಸ್ ರೆಕಾರ್ಡಿಂಗ್ ಬಟನ್ ಪ್ರೆಸ್ ಮಾಡಿ ಅರ್ಧದಲ್ಲಿ ವಿರಾಮ ಪಡೆದು ನಂತರ ಅದನ್ನು ಮುಂದುವರೆಸಿ ಕಳುಹಿಸಬಹುದು. ಸದ್ಯ ಈ ಹೊಸ ಆಯ್ಕೆಗಳೆಲ್ಲ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಸ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ