ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ನಿರಾಕರಿಸಿದ್ದನ್ನು ಖಂಡಿಸಿ, ಬ್ರಹ್ಮರ್ಷಿ ಗುರುಗಳಿಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಸಂತ, ಮಾನವತಾವಾದಿ, ಸಮಾಜ ಸುಧಾರಕ, ಹಿಂದುಳಿದ ವರ್ಗಗಳ ಶೋಷಿತ ವರ್ಗಗಳ ತುಳಿತಕ್ಕೆ ಒಳಗಾದ ಸಮುದಾಯದವರನ್ನು ಮೇಲೆತ್ತಿದವರು ಮತ್ತು ಅವರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿದವರು ಹಾಗೂ ಆಕ್ಷರ ಬ್ರಹ್ಮ ಎಂದೇ ಜನಮಾನಸದಲ್ಲಿ ಮನೆ ಮಾತಾಗಿರುವ ಬ್ರಹ್ಮರ್ಷಿ ನಾರಾಯಣ ಗುರುಗಳೆಂಬ ಬೆಳಕು ಕೇರಳದ ಮೂಲಕ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ, ಸರ್ವ ಧರ್ಮಗಳ ಜನರು ಸಹ ಬಾಳ್ವೆಗಳ ಮೂಲಕ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು. ಇಂತಹ ಮನುಕುಲದ ದಿವ್ಯ ಜ್ಯೋತಿಯೊಂದರ ಸ್ಥಬ್ದ ಚಿತ್ರವೊಂದನ್ನು ಕೇರಳದ ಸರ್ಕಾರವು ದೆಹಲಿಯಲ್ಲಿ ನಡೆಯಲಿರುವ ಜನವರಿ 26ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕೇರಳ ರಾಜ್ಯದ ಹೆಮ್ಮೆಯ ಪ್ರತೀಕವಾಗಿ ಕಳಿಸಿರುವುದನ್ನು ಕೇಂದ್ರ ಆಯ್ಕೆ ಸಮಿತಿ ತಿರಸ್ಕರಿಸಿರುವುದು ಮಾಧ್ಯಮಗಳ ಮೂಲಕ ವರದಿಯಾಗುತ್ತಿರುವುದು ಅತ್ಯಂತ ನೋವಿನ ವಿಚಾರವಾಗಿದೆ.
ಸ್ತ್ರೀ ಸಮಾನತೆ ಪ್ರತಿಪಾದಿಸಿ ಜಾತಿ, ಮತ ಭೇದಗಳನ್ನು ದಿಕ್ಕರಿಸಿ ಸಮಾಜೋದ್ಧಾರಕ್ಕೆ ಶ್ರಮಿಸಿದ ಮಹಾನ್ ಚೇತನಾ ಶ್ರೀ ನಾರಾಯಣ ಗುರುಗಳು, ಆತ್ಮದಲ್ಲಿ ಅರಿವಿನ ಬೆಳಕು ಮೂಡಿಸಿದವರು, ಅಂತವರ ಮೂರ್ತಿ ಇದ್ದ ಸ್ಥಬ್ದ ಚಿತ್ರವನ್ನು ತಿರಸ್ಕಾರ ಮಾಡಿರುವುದು ಕ್ಷಮಾರ್ಹವಲ್ಲದ ತಪ್ಪು ಹಾಗೂ ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳುವಳಿಕೆ ಇಲ್ಲದ ಆಜ್ಞಾನದ ಪರಮಾವಧಿ, ಆಯ್ಕೆ ಸಮಿತಿಯಲ್ಲಿ ಇಂತಹ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ. ಸಮಾನತೆಯ ಸಮಾಜದ ಕನಸು ಕಾಣುವ ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕಿದೆ. ಇದು “ಹಿಂದುಳಿದ ಶೋಷಿತ ದಲಿತ ಗುರುಗಳಿಗೆ ಮತ್ತು ಸಮಾಜಕ್ಕೆ ಮಾಡಿದ ಅವಮಾನವಾಗಿದ್ದು” ಬ್ರಹ್ಮರ್ಷಿ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದ ಮೆರವಣಿಗೆಯ ಸಮಿತಿಯ ಅಂಗೀಕಾರ ಮಾಡುವುದರ ಮುಖಾಂತರ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಅವಕಾಶ ನೀಡಬೇಕು ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳಿಗೆ ಗೌರವವನ್ನು ನೀಡಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ರವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ವೇಳೆ ಯುವ ಜೆಡಿಎಸ್ ರಾಜ್ಯ ನಾಯಕರಾದ ಫೈಝಲ್ ರೆಹಮಾನ್, ಜಿಲ್ಲಾ ನಾಯಕರುಗಳಾದ ಫೈಝಲ್ ಮೊಹಮ್ಮದ್, ಹಿತೇಶ ರೈ, ಸತ್ತಾರ್ ಬಂದರ್, ನಾಝೀರ್ ಕಂದಕ್, ರಾಶ್ ಬ್ಯಾರಿ, ಸುಮೀತ್ ಸುವರ್ಣ, ಕೌಶಕ್, ಜಿತೇಶ್, ರಿತೇಶ್, ರೋಹನ್, ಪ್ರದೀಪ್, ಮೊಹಮ್ಮದ್ ಬಿಲಾಲ್, ಆರೀಫ್, ಅಕ್ರಮ್, ಮತ್ತಿತರರು ಉಪಸ್ಥಿತರಿದ್ದರು.