dtvkannada

ಗದಗ: ಗದಗ ಜಿಲ್ಲೆಯ ನರಗುಂದದಲ್ಲಿ ಅಮಾಯಕ ಮುಸ್ಲಿಮ್ ಯುವಕನ ಬರ್ಬರ ಹತ್ಯೆ ನಡೆಸಿದ ಸಂಘಪರಿವಾರದ ದುಷ್ಕರ್ಮಿಗಳು ಮತ್ತು ದುಷ್ಕೃತ್ಯಕ್ಕೆ ಪ್ರಚೋದನೆ ನೀಡಿದ ನಾಯಕರ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಆಗ್ರಹಿಸಿದ್ದಾರೆ.

ಜೀವನೋಪಾಯಕ್ಕಾಗಿ ಹೊಟೇಲ್ ನಡೆಸುತ್ತಿದ್ದ ಸಮೀರ್ ರಾತ್ರಿ ಕೆಲಸ ಮುಗಿಸಿ ತನ್ನ ಸ್ನೇಹಿತ ಸಂಶೀರ್ ನೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಸಂಘಪರಿವಾರದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗಂಭೀರ ದಾಳಿಯಿಂದಾಗಿ ಸಮೀರ್ ಮೃತಪಟ್ಟರೆ, ಆತನ ಸ್ನೇಹಿತ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೆಲ ದಿನಗಳ ಹಿಂದೆ ಆರೆಸ್ಸೆಸ್ ಕಾರ್ಯಕರ್ತರು ದುರುದ್ದೇಶಪೂರ್ವಕವಾಗಿ ಮುಸ್ಲಿಮ್ ಯುವಕನಿಗೆ ತಮ್ಮ ವಾಹನ ಢಿಕ್ಕಿ ಹೊಡೆಸಿದ ಬಳಿಕ ಸ್ಥಳದಲ್ಲಿ ಸಣ್ಣ ಮಟ್ಟದ ವಾಗ್ವಾದ ನಡೆದಿತ್ತು. ಆ ನಂತರ ಸಂಘಪರಿವಾರದ 40 ಮಂದಿ ದುಷ್ಕರ್ಮಿಗಳು ಗುಂಪುಕಟ್ಟಿಕೊಂಡು ಬಂದು ಮುಸ್ಲಿಮ್ ಮೊಹಲ್ಲಾಗೆ ನುಗ್ಗಿ ಬೆದರಿಕೆಯೊಡ್ಡಿದ್ದರು. ಈ ವೇಳೆ ಎರಡೂ ಗುಂಪುಗಳ ಮಧ್ಯೆ ಘರ್ಷಣೆಯೂ ನಡೆದಿತ್ತು.

ಅದಾದ ನಂತರ ಸಂಘಪರಿವಾರವು ನಗರದಲ್ಲಿ ಸುಮಾರು 2 ಕಿ.ಮೀ. ವರೆಗೂ ಬೃಹತ್ ರಾಲಿ ನಡೆಸಿದ್ದು, ಇದರಲ್ಲಿ ರಸ್ತೆಯುದ್ದಕ್ಕೂ ದ್ವೇಷ ಹರಡುವ ಹಾಗೂ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಲಾಯಿತು. ನಂತರ ಪೊಲೀಸ್ ಠಾಣೆಯ ಆವರಣದಲ್ಲಿ ಜಮಾಯಿಸಿಕೊಂಡು ಸಂಘಪರಿವಾರದ ನಾಯಕರು ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದರು. ನರಗುಂದದಲ್ಲಿ ಕೋಮು ದ್ವೇಷ ಹರಡಲು ಮತ್ತು ಸೌಹಾರ್ದ ಕೆಡಿಸಲು ಸಂಘಪರಿವಾರವು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ. ಮೌಲಾನಾ ಆಝಾದ್ ಉರ್ದು ಶಾಲೆಗೆ ಅಕ್ರಮವಾಗಿ ಪ್ರವೇಶಿಸಿ ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಿರುಕುಳ ನೀಡಿದ್ದು ಇತ್ತೀಚಿನ ತಾಜಾ ಉದಾಹರಣೆಯಾಗಿದೆ.ಸಂಘಪರಿವಾರದ ನಾಯಕರ ದ್ವೇಷ ತುಂಬಿದ ಭಾಷಣದಿಂದ ಪ್ರಚೋದಿತರಾಗಿಯೇ ದುಷ್ಕರ್ಮಿಗಳು ಮುಸ್ಲಿಮ್ ಯುವಕರ ಮೇಲೆ ಬರ್ಬರ ದಾಳಿ ನಡೆಸಲಾಗಿರುವುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಂತಕರನ್ನು ಕೂಡಲೇ ಬಂಧಿಸುವುದರ ಜೊತೆಗೆ ದುಷ್ಕೃತ್ಯಕ್ಕೆ ಪ್ರಚೋದನೆ ನೀಡಿದ ನಾಯಕರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಿಕೊಂಡು ಸಂಘೀ ಗೂಂಡಾಗಳು ನಡೆಸುತ್ತಿರುವ ದುಷ್ಕರ್ಮಗಳಿಗೆ ಕಡಿವಾಣ ಹಾಕಬೇಕು. ದಾಳಿಗೊಳಗಾದ ಇಬ್ಬರು ಯುವಕರ ಸಂತ್ರಸ್ತ ಕುಟುಂಬಕ್ಕೂ ಸರಕಾರ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!