ವಿಟ್ಲ: ಹಳೇ ದ್ವೇಷದ ವೈಷಮ್ಯ ನೆಪವಾಗಿಸಿ ಮನೆಗೆ ನುಗ್ಗಿದ ತಂಡವೊಂದು ಮನೆಯಲ್ಲಿದ್ದ ಮಹಿಳೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದಲ್ಲಿ ನಡೆದಿದೆ.
ನನ್ನ ಮೈಗೆ ಕೈಹಾಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆ ನಿವಾಸಿ ಬಾಪಕುಂಞಿರವರ ಪತ್ನಿ ಮರಿಯಮ್ಮ ದೂರುದಾರರಾಗಿದ್ದು, ಪುತ್ತೂರು ನಿವಾಸಿ ಹಕೀಂ, ಶಮೀರ್, ಇಸಾಕ್ ಸಹಿತ ನಾಲ್ವರು ಪ್ರಕರಣದ ಆರೋಪಿಗಳಾಗಿದ್ದಾರೆ.
ಜ.19ರಂದು ನಾನು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆಯ ಮೈಕೆಯ ನಮ್ಮ ಮನೆಯಲ್ಲಿದ್ದ ವೇಳೆ ಕಾರಿನಲ್ಲಿ ಬಂದ ಶಮೀರ್, ಇಸಾಕ್, ಹಕೀಂ ಮತ್ತು ಪರಿಚಯವಿಲ್ಲದ ಇನ್ನೊಬ್ಬ ನಮ್ಮ ಮನೆಯ ಹಿಂಬಾಗಿಲಿನಿಂದ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ನನ್ನ ಮೈಗೆ ಕೈ ಹಾಕಿ, ದೊಣ್ಣೆಯಿಂದ ಹಲ್ಲೆ ಮಾಡಿ, ನನ್ನನ್ನು ದೂಡಿ ಹಾಕಿದ್ದಲ್ಲದೆ ನಮ್ಮ ವಿಚಾರಕ್ಕೆ ಬಂದರೆ ನಿಮ್ಮನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಘಟನೆಗೆ ನನ್ನ ಮಗನ ಮೇಲೆ ಇರುವ ಪೂರ್ವ ದ್ವೇಷವೇ ಕಾರಣವೆಂದು ಮರಿಯಮ್ಮರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.