ಮೆಟ್ರೋ ರೈಲು ಆಗಮಿಸುತ್ತಿದ್ದ ವೇಳೆ ಫ್ಲಾಟ್ ಫಾರ್ಮ್‍ನಲ್ಲಿ ನಿಂತಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಉದ್ದೇಶ ಪೂರ್ವಕವಾಗಿ ರೈಲ್ವೆ ಹಳಿಗೆ ತಳ್ಳಿದ್ದರೂ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾಳೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶುಕ್ರವಾರ ಸಂಜೆ ಬೆಲ್ಜಿಯಂನಲ್ಲಿ ಈ ಘಟನೆ ನಡೆದಿದ್ದು, 30 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಮಹಿಳೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವುದನ್ನು ಕಾಣಬಹುದಾಗಿದೆ. ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊರ್ವ ಮಹಿಳೆಯನ್ನು ಹಿಂದಿನಿಂದ ಬಂದು ತಳ್ಳಿದ್ದಾನೆ. ಈ ವೇಳೆ ರೈಲ್ವೆ ಹಳಿಯ ಮೇಲೆ ಮಹಿಳೆ ಬಿದ್ದು, ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಇದನ್ನು ಗಮನಿಸಿದ ರೈಲು ಚಾಲಕ ಕೂಡಲೇ ಬ್ರೇಕ್ ಹಾಕಿದ್ದು, ಕೇವಲ ಇಂಚುಗಳ ಅಂತರದಲ್ಲಿ ಮಹಿಳೆ ಬಚಾವ್ ಆಗಿದ್ದಾಳೆ. ನಂತರ ಸ್ಥಳದಲ್ಲಿಯೇ ಇದ್ದ ಜನರು ಆಕೆಯ ಸಹಾಯಕ್ಕೆ ದಾವಿಸಿದ್ದಾರೆ.
ನಂತರ ಸಂತ್ರಸ್ತೆ ಹಾಗೂ ಮೆಟ್ರೋ ಚಾಲಕ ಇಬ್ಬರನ್ನು ಸಹ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿ ಕೊಡಲಾಯಿತು. ಮಹಿಳೆಯನ್ನು ರೈಲ್ವೆ ಹಳಿಗೆ ತಳ್ಳಿ ಓಡಿ ಹೋಗುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆತನ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲು ನ್ಯಾಯಾಲಯದಿಂದ ಮನೋವೈದ್ಯಕೀಯ ತಜ್ಞರನ್ನು ನೇಮಿಸಲಾಗಿದ್ದು, ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.