ಉಪ್ಪಿನಂಗಡಿ, ಜ.20. ಗ್ರಾಮೀಣ ಭಾಗದ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39ನೇ ರ‍್ಯಾಂಕ್ ನಲ್ಲಿ ಆಯ್ಕೆಯಾಗಿದ್ದಾರೆ.
ಉಪ್ಪಿನಂಗಡಿ ಸಮೀಪದ ಕುಂತೂರು ಕೋಚಕಟ್ಟೆ ನಿವಾಸಿ ಎ.ಕೆ. ಇಸ್ಮಾಯಿಲ್ ಹಾಗೂ ಝುಬೈದಾ ಹೆಂತಾರು ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯವಳಾದ ಬದ್ರುನ್ನಿಶಾ ಇದೀಗ ಪಿಎಸ್ಐ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕಲಿತು ಯಶಸ್ವಿಯಾಗಿದ್ದಾರೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಂತೂರಿನಲ್ಲಿ ಪಡೆದಿರುವ ಅವರು, ಪ್ರೌಢಶಾಲಾ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು ಹಾಗೂ ಪಿಯುಸಿ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜದಲ್ಲಿ ಮತ್ತು ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಬಿಎಸ್ಸಿ ಕೃಷಿ ಪದವಿಯನ್ನು ಪಡೆದಿರುತ್ತಾರೆ.
ಇಸ್ಮಾಯಿಲ್ ಝುಬೈದ ದಂಪತಿಯ ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂವರು ಸರಕಾರಿ ಉದ್ಯೋಗದಲ್ಲಿದ್ದಾರೆ. ಹಿರಿಯ ಮಗಳು ನಫೀಸ ಡಾಕ್ಟರ್ ಹುದ್ದೆಯಲ್ಲಿದ್ದು, ಎರಡನೇಯ ಮಗಳು ನಸೀಬ ಕುಂತೂರು ಎಂಬವರು ಮಂಗಳೂರಿನಲ್ಲಿ ಕಾರ್ಮಿಕ ಇಲಾಖೆಯಲ್ಲಿ ಉದ್ಯೊಗದಲ್ಲಿದ್ದಾರೆ. ಮೂರನೇ ಮಗಳು ಆಶುರ ಪುತ್ತೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ಉದ್ಯೊಗದಲ್ಲಿದ್ದು, ಇದೀಗ ಕಿರಿಯ ಮಗಳು ಬದ್ರುನ್ನೀಶಾ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಆಗಿ ಆಯ್ಕೆಯಾಗುವ ಮೂಲಕ ಪೋಷಕರು ಮತ್ತಷ್ಟು ಹೆಮ್ಮೆ ಪಡುವಂತಾಗಿದೆ.