ಮಂಗಳೂರು; ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ವರ್ಷಂಪ್ರತಿ ನೀಡಲಾಗುವ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದ್ದು, ಬಂಟ್ವಾಳದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 73ರ ಹರೆಯದ ಮಹಾಲಿಂಗ ನಾಯ್ಕ ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕರಾಗಿದ್ದು ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ.ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಭಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಟ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಮಾಹಾಲಿಂಗ ನಾಯ್ಕ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಕೀರ್ತಿಗೆ ಪಾತ್ರರಾಗಿದ್ದಾರೆ.
2022ರ ಸಾಲಿನಲ್ಲಿ ನಾಲ್ವರು ಸಾಧಕರಿಗೆ ಪದ್ಮ ವಿಭೂಷಣ, 17 ಸಾಧಕರಿಗೆ ಪದ್ಮಭೂಷಣ ಹಾಗೂ 107 ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಐವರು ಕನ್ನಡಿಗರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಐವರಿಗೆ ಪದ್ಮಶ್ರೀ ಪ್ರಶಸ್ತಿ:
ಸಿದ್ದಲಿಂಗಯ್ಯ (ಮರಣೋತ್ತರ) – ಸಾಹಿತ್ಯ ಮತ್ತು ಶಿಕ್ಷಣ
ಅಮೈ ಮಹಾಲಿಂಗ ನಾಯಕ್ – ಕೃಷಿ.
ಸುಬ್ಬಣ್ಣ ಅಯ್ಯಪ್ಪನ್ – ವಿಜ್ಞಾನ ಮತ್ತು ಎಂಜಿನಿಯರಿಂಗ್.
ಎಚ್ ಆರ್ ಕೇಶವಮೂರ್ತಿ – ಕಲೆ.
ಅಬ್ದುಲ್ ಖಾದರ್ ನಡಕಟ್ಟಿನ್ – ತಳಮಟ್ಟದ ನಾವಿನ್ಯತೆ.
ಪದ್ಮ ವಿಭೂಷಣ ಪುರಸ್ಕೃತರು:
ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪುರಸ್ಕಾರಕ್ಕೆ ಪ್ರಭಾ ಅತ್ರೆ (ಕಲೆ; ಮಹಾರಾಷ್ಟ್ರ), ರಾಧೇಶ್ಯಾಮ್ ಖೆಮ್ಕಾ (ಸಾಹಿತ್ಯ ಮತ್ತು ಶಿಕ್ಷಣ, ಮರಣೋತ್ತರ, ಉತ್ತರ ಪ್ರದೇಶ), ಜನರಲ್ ಬಿಪಿನ್ ರಾವತ್ (ನಾಗರಿಕ ಸೇವೆ, ಮರಣೋತ್ತರ, ಉತ್ತರಾಖಂಡ), ಕಲ್ಯಾಣ್ಸಿಂಗ್ (ಮರಣೋತ್ತರ, ರಾಜಕಾರಣ, ಉತ್ತರ ಪ್ರದೇಶ).
ಧಾರವಾಡದ ಕೂರಿಗೆ ತಜ್ಞ ಅಬ್ದುಲ್ ಖಾದರ್ ನಡಕಟ್ಟಿನ್ಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ಸಂದಿದೆ. ನಡಕಟ್ಟಿನ್ ಅವರು ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿ. ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದರು.