ಬೆಂಗಳೂರು: ಪರಿಷತ್ ವಿಪಕ್ಷ ನಾಯಕರಾಗಿ ಬಿಕೆ ಹರಿಪ್ರಸಾದ್ರವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್ಸಿ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯಗಾಗಿ ದೇವೇಗೌಡರನ್ನು ಬಿಟ್ಟಿದ್ದೆವು. ಜೈಲಿನಲ್ಲಿದ್ದು ಕಟ್ಟಿದ್ದ ಪಕ್ಷ ಜೆಡಿಎಸ್ ಬಿಟ್ಟಿದ್ದೆವು. ಒಂದೇ ಬಾರಿಗೆ ಎಲ್ಲ ವಿಚಾರಗಳನ್ನು ಹೇಳುವುದಿಲ್ಲ. ಕಂತು ಕಂತಾಗಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟೆವು. ಅದಕ್ಕೀಗ ಸಿದ್ದರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ. ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಿದ್ರು. ಇದು ತಿಳಿದು ಬಾದಾಮಿಯಲ್ಲಿ ನಾಮಪತ್ರ ಹಾಕಿಸಿದ್ದೆ. ಅಲ್ಲಿನ ಎಲ್ಲ ನಾಯಕರನ್ನು ಒಪ್ಪಿಸಿ ನಾಮಪತ್ರ ಹಾಕಿಸಿದ್ದೆ. ಬಾದಾಮಿಯಲ್ಲಿ ಅವರು ಗೆದ್ದು ಶಾಸಕರು ಕೂಡ ಆದರು. ಅವರಿಗೆ ನಾನು ಹೊಸ ರಾಜಕೀಯ ಜೀವನ ಕೊಟ್ಟೆ. ಆದರೆ ಅವರು ನಮಗೆ ಇಂದು ಹೊಸ ಗಿಫ್ಟ್ ಕೊಟ್ಟಿದ್ದಾರೆ ಅಂತ ಎಮ್ಎಲ್ಸಿ ಸಿಎಂ ಇಬ್ರಾಂಹಿಂ ಹೇಳಿದ್ದಾರೆ.
ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ ಸಿಎಂ ಇಬ್ರಾಹಿಂ, ದೇವೇಗೌಡರನ್ನು ಕೇಳಿ ಮುಂದೆ ತೀರ್ಮಾನ ಮಾಡುತ್ತೇನೆ. ನನಗೆ ಸ್ಥಾನ ತಪ್ಪಿಸಿದ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು. ಡಿಕೆ ಶಿವಕುಮಾರ್‌ಗೂ ನಮಗೂ ಹೊಂದಾಣಿಕೆಯಾಗಲ್ಲ. ಸಿದ್ದರಾಮಯ್ಯಗೂ ನನಗೆ ಚೆನ್ನಾಗಿತ್ತು. ದೆಹಲಿಯಿಂದ ನನಗೆ ಹಲವು ಕರೆಗಳು ಬಂದಿವೆ. ಎಲ್ಲ ಮಾಹಿತಿ ನನ್ನ ಬಳಿ ಇಟ್ಟುಕೊಂಡಿದ್ದೇನೆ. ಚುನಾವಣಾ ಪ್ರಚಾರಕ್ಕೆ ಯುಪಿಗೆ ಬರುವಂತೆ ಕರೆಯುತ್ತಿದ್ದಾರೆ. ಆದರೆ ನಾವೇನು ಅಷ್ಟು ದೊಡ್ಡ ನಾಯಕರೇನು ಅಲ್ಲ. ನಮ್ಮಿಂದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಾದರೆ ನಿರ್ಧರಿಸುವೆ. ರಾಜಕೀಯ ವಿದ್ಯಮಾನ ನೋಡಿಕೊಂಡು ತೀರ್ಮಾನಿಸುವೆ. ಎಐಸಿಸಿ ನನಗೆ ಸಂಕ್ರಾಂತಿಗೆ ಶುಭಾಶಯವನ್ನು ನೀಡಿದೆ. ಎಐಸಿಸಿ ಗಿಫ್ಟ್ ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಸೋನಿಯಾ ನಮ್ಮ ಮೇಲಿದ್ದ ಭಾರ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ನಾವು ಸ್ವತಂತ್ರನಾಗಿದ್ದೇನೆ. ಸಿದ್ದರಾಮಯ್ಯ ಅವರಿಂದಲೇ ನಾನು ಕಾಂಗ್ರೆಸ್‌ಗೆ ಬಂದೆ. ಸಿದ್ದರಾಮಯ್ಯ ಸಲುವಾಗೆ ದೇವೇಗೌಡರನ್ನು ಬಿಟ್ಟು ಬಂದೆ. 1996ರಲ್ಲಿ ರಾಜ್ಯಸಭೆ ಟಿಕೆಟ್ ಘೋಷಿಸಿ ಕ್ಯಾನ್ಸಲ್ ಮಾಡಿದ್ರು. ಆಗ ಕಾಂಗ್ರೆಸ್ ಪಕ್ಷ ಬಿಟ್ಟೆ, ಆಗ ಕಾಂಗ್ರೆಸ್ ಎಲ್ಲಿ ಹೋಯ್ತು? 20 ವರ್ಷದ ಬಳಿಕ ಕಾಂಗ್ರೆಸ್ ಅದೇ ರೀತಿ ಮಾಡಿದೆ ಎಂದು ಬೆಂಗಳೂರಿನಲ್ಲಿ ಎಂಎಲ್‌ಸಿ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.