ಮುಳಬಾಗಿಲು: ನಗರದ ಬಳೇಚಂಗಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಿದರೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ಬಿಇಒ ಡಿ. ಗಿರಿಜೇಶ್ವರಿ ದೇವಿ ಅಮಾನತುಗೊಳಿಸಿದ್ದಾರೆ.
ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಮುಖ್ಯ ಶಿಕ್ಷಕಿ ಅವಕಾಶ ನೀಡಿದ್ದಾರೆ ಎಂಬ ಆರೋಪದ ಮೇಲೆ ಡಿಡಿಪಿಐ ಹಾಗೂ ಸ್ಥಳೀಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಡಿಡಿಪಿಐ ಅವರು ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದರು.
ಸದರಿ ಈ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿರುವುದನ್ನು ಖಂಡಿಸಿ ಹಳೆಯ ವಿದ್ಯಾರ್ಥಿಗಳು ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೇ ಕಾರಣಕ್ಕೆ ಅಧಿಕಾರಿಗಳು ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಏನಿದು ಘಟನೆ?
ಮುಳಬಾಗಲು ನಗರದ ಸೋಮೇಶ್ವರ ಪಾಳ್ಯದ ಬಳೆಚಂಗಪ್ಪ ಸರಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ದಿನ ಪ್ರತ್ಯೇಕ ಕೊಠಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ಗೆ ಅವಕಾಶ ಕಲ್ಪಿಸಿದ್ದು, ಇದರಿಂದ ಸಿಟ್ಟುಗೊಂಡ ಹಿಂದೂಪರ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು ವಾರದ ಹಿಂದೆ ನೂರಾರು ಸಂಖ್ಯೆಯಲ್ಲಿ ಶಾಲೆಯ ಮುಂದೆ ಜಮಾಯಿಸಿದ್ದರು. ಶಾಲೆಯಲ್ಲಿ ಮಕ್ಕಳಿಗೆ ನಮಾಜ್ ನೀಡಲು ಅವಕಾಶ ಮಾಡಿಕೊಟ್ಟ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿದ್ದರು.