ಚಿಕ್ಕಬಳ್ಳಾಪುರ: ಕೆಎಸ್‍ಆರ್‌ಟಿಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಹಲವರು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರಿಗೆ ತೆರಳುತ್ತಿದ್ದ ಪುತ್ತೂರು ಘಟಕಕ್ಕೆ ಸೇರಿದ ಬಸ್‍ಗೆ ಗೌರಿಬಿದನೂರು ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಕಬ್ಬಿಣದ ರಾಡ್‍ಗಳನ್ನು ಹೊತ್ತು ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.
ಕಣಿವೆ ಪ್ರದೇಶದಲ್ಲಿ ಸೇತುವೆ ಬಳಿ ಕವಲು ದಾರಿಯಿದ್ದು, ಎಡ ಬದಿಯಲ್ಲಿ ಬರಬೇಕಿದ್ದ ಕ್ಯಾಂಟರ್ ಚಾಲಕ ಬಲಬದಿಯಲ್ಲಿ ಬಂದಿದ್ದು, ಎದರುಗಡೆ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದ್ದಾನೆಂದು ತಿಳಿದು ಬಂದಿದೆ.
ಅಪಘಾತದ ಪರಿಣಾಮ ಎರಡು ವಾಹನಗಳ ಮುಂಭಾಗ ಜಖಂಗೊಂಡಿದ್ದು, ಕ್ಯಾಂಟರ್‌ನಲ್ಲಿದ್ದವರು ಹಾಗೂ ಬಸ್ ಚಾಲಕ, ನಿರ್ವಾಹಕ ಸೇರಿ 7-8 ಮಂದಿ ಗಾಯವಾಗಿದ್ದು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.