ಬೆಂಗಳೂರು: ಆಟದ ಮೈದಾನಲ್ಲಿ ಮಣ್ಣು ಸುರಿದು ಅದನ್ನು ಗ್ರಾಮಸ್ಥರು, ಮಕ್ಕಳು ಬಳಸಲಾಗದ ಸ್ಥಿತಿಗೆ ತಂದಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಪುತ್ತೂರು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಪಿಡಿಒಗೆ ನೋಟಿಸ್ ಜಾರಿಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಆಟದ ಮೈದಾನಲ್ಲಿ ಮಣ್ಣು ಸುರಿದು ಅದನ್ನು ಗ್ರಾಮಸ್ಥರು, ಮಕ್ಕಳು ಬಳಸಲಾಗದ ಸ್ಥಿತಿಗೆ ತಂದಿದ್ದಾರೆ ಅದನ್ನು ಸರಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ನೆಕ್ಕಿಲಾಡಿ ಗ್ರಾಮದ ಜತೀಂದ್ರ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿ ಪುತ್ತೂರು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಪಿಡಿಒಗೆ ನೋಟಿಸ್ ಜಾರಿಗೊಳಿಸಿದೆ.
ದೂರುದಾರರ ಆರೋಪವೇನು?
ನೆಕ್ಕಿಲಾಡಿ ಗ್ರಾಮದ ಸರ್ವೇ ನಂಬರ್ 88/1 ಮತ್ತು 34ರಲ್ಲಿನ ಜಾಗವನ್ನು ಆಟದ ಮೈದಾನಕ್ಕೆ ಮೀಸಲಿರಿಸಿ ಸರ್ಕಾರ ಆದೇಶಿಸಿದೆ. ಆದರೆ, 2021ರ ಮೇ ತಿಂಗಳಲ್ಲಿ ಗ್ರಾಮದ ಮಳೆನೀರು ಕಾಲುವೆ ಕಾಮಗಾರಿ ವೇಳೆ ತೆಗೆದ ಮಣ್ಣನ್ನು ಆಟದ ಮೈದಾನಕ್ಕೆ ತಂದು ಸುರಿಯಲಾಗಿದೆ.
ಆಟದ ಮೈದಾನದಲ್ಲಿ ಮಣ್ಣಿನ ರಾಶಿ ಬಿದ್ದಿರುವುದರಿಂದ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಮೈದಾನದಲ್ಲಿ ಸುರಿದಿರುವ ಮಣ್ಣು ತೆರವುಗೊಳಿಸಿ,
ಮೊದಲಿನಂತೆ ಸರಿಪಡಿಸಲು ಕೋರಿ 2021ರ ಜುಲೈ 20ರಂದು ಮನವಿ ನೀಡಿದ್ದರೂ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಪರಿಗಣಿಸಿಲ್ಲ ಎಂದು ವಿವರಿಸಿದರು.
ಇದಕ್ಕೆ ಸರ್ಕಾರದ ಪರ ವಕೀಲರು ವಾದಿಸಿ, ಅರ್ಜಿದಾರರು ತಿಳಿಸಿರುವಂತೆ ಒಂದು ವೇಳೆ ಮಳೆನೀರು ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಎಂದಾದರೆ ಯಾವುದೇ ವಿಳಂಬ ಮಾಡದೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿತು.