ಕಾನ್ಪುರ: ಎಲೆಕ್ಟ್ರಿಕ್ ಬಸ್ವೊಂದು ನಿಯಂತ್ರಣ ಕಳೆದುಕೊಂಡು ಮೂರ್ನಾಲ್ಕು ವಾಹನಗಳು, ರಸ್ತೆ ಬದಿಯಲ್ಲಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದ ಟಾಟ್ ಮಿಲ್ನಲ್ಲಿ ನಡೆದಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಮೂರು ಕಾರುಗಳು, ಹಲವು ಬೈಕ್ಗಳು ಸಂಪೂರ್ಣ ನಾಶಗೊಂಡಿವೆ. ಅಷ್ಟೇ ಅಲ್ಲ, ಅಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸ್ ಬೂತ್, ನಿಂತಿದ್ದ ಟ್ರಕ್ಗೆ ಕೂಡ ಡಿಕ್ಕಿಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಷ್ಟೆಲ್ಲ ಅವಾಂತರ ಮಾಡಿದ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅವನಿಗಾಗಿ ಹುಡುಕುತ್ತಿದ್ದೇವೆ. ಸದ್ಯ ಗಾಯಗೊಂಡ ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಪೂರ್ವ ಕಾನ್ಪುರದ ಡೆಪ್ಯೂಟಿ ಕಮಿಷನರ್ ಪ್ರಮೋದ್ ಕುಮಾರ್ ಹೇಳಿದ್ದಾರೆ. ಚಾಲಕ ಅತ್ಯಂತ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಹೀಗಾಗಿ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.
https://twitter.com/ANINewsUP/status/1487881813338976257?
ಬಸ್ ದುರಂತದಲ್ಲಿ 6 ಮಂದಿ ಸಾವನ್ನಪ್ಪುತ್ತಿದ್ದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ಕಾನ್ಪುರದಲ್ಲಿ ರಸ್ತೆ ಅಪಘಾತದ ಸುದ್ದಿ ಕೇಳಿದೆ. ಮೃತರ ಕುಟುಂಬಗಳಿಗೆ ನೋವು ಸಹಿಸುವ ಶಕ್ತಿ ಭಗವಂತ ನೀಡಲಿ. ಗಾಯಗೊಂಡವರು ಬಹುಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.