ಉಡುಪಿ: ಇಲ್ಲಿನ ಸರಕಾರಿ ಮಹಿಳಾ ಕಾಲೇಜು ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎಂದು ವಾದ ಮಾಡಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಸಂವಿಧಾನದಡಿ ಧಾರ್ಮಿಕ ಹಕ್ಕುಗಳನ್ನು ನೀಡಲಾಗಿದೆ. ಹಿಜಾಬ್ ಧರಿಸುವುದೂ ಧಾರ್ಮಿಕ ಹಕ್ಕಿನ ಭಾಗ ಆಗಿದೆ. ಆದರೆ ಹಿಜಾಬ್ ಧರಿಸಲು ಕಾಲೇಜು ಅನುಮತಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.
ಉಡುಪಿಯ ಸರ್ಕಾರಿ ಮಹಿಳಾ ಕಾಲೇಜು ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸೋಮವಾರ ಕಾಲೇಜಿನಲ್ಲಿ ಸಭೆ ನಡೆಸಲಾಗಿತ್ತು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಕಾಲೇಜಿನ ಆಡಳಿತ ಮಂಡಳಿ, ಡಿಡಿಪಿಯು ಸಭೆಯಲ್ಲಿ ಭಾಗಿ ಆಗಿದ್ದರು. ಒಂದೂವರೆ ತಿಂಗಳುಗಳ ಕಾಲ ಈ ವಿವಾದ ನಡೆಯಿತು. ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ ಇದೆ. ಕಾಲೇಜಿಗೆ ಬರದಿದ್ದರೆ ಆನ್ಲೈನ್ ಕ್ಲಾಸ್ ಅವಕಾಶ ಮಾಡಲಾಗಿದೆ. ಇನ್ನು ವಿದ್ಯಾರ್ಥಿಗಳು ಹೆಸರಿಗಾಗಿ ಹಠ ಮಾಡುವುದು ಸರಿಯಲ್ಲ. ಹಿಜಾಬ್ಗೆ ನಮ್ಮ ವಿರೋಧ ಇಲ್ಲ ಅದು ಇಸ್ಲಾಂನ ಪದ್ಧತಿ. ಶರಿಯತ್ ಆಧಾರಿತ ರಾಷ್ಟ್ರ ಬೇರೆ, ಪ್ರಜಾಪ್ರಭುತ್ವ ರಾಷ್ಟ್ರ ಬೇರೆ. ಭಾರತದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿಕೆ ನೀಡಿದ್ದರು.