ಮಂಗಳೂರು: ಯುವಕರ ಗ್ಯಾಂಗ್ ಒಂದು ಯುವಕನೋರ್ವನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನ ಕಾಟಿಪಳ್ಳದ 6 ನೇ ಬ್ಲಾಕ್‌ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಗಾಯಗೊಂಡ ಯುವಕನನ್ನು ಅನಾಸ್(29) ಎಂದು ಗುರುತಿಸಲಾಗಿದೆ. ಗಂಭಿರ ಗಾಯಗೊಂಡ ಆತನನ್ನು ಮುಕ್ಕ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ಅನಾಸ್, ಕಾಟಿಪಳ್ಳದಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದು, ನಿನ್ನೆ ರಾತ್ರಿ 11.30ರ ಸುಮಾರಿಗೆ ಮನೆ ಬಾಡಿಗೆ ವಿಚಾರದಲ್ಲಿ ಮಾತುಕತೆ ನಡೆಸುವ ಸಲುವಾಗಿ 6ನೇ ಬ್ಲಾಕಿನ ಅಬುಬಕ್ಕರ್ ಎಂಬವರ ಮನೆಗೆ ತೆರಳಿದ್ದ.
ಮನೆಯ ಹೊರಗೆ ನಿಂತು ಮಾತನಾಡುತ್ತಿದ್ದಾಗ ಕಾರಿನಲ್ಲಿ ಅಲ್ಲಿಗೆ ಬಂದ ಚಾರು ಅವಾಚ್ಯ ಶಬ್ದಗಳಿಂದ ಬೈದು, ಬೆನ್ನ ಹಿಂದೆ ಇರಿಸಿದ್ದ ಮಾರಕಾಸ್ತ್ರದಿಂದ ತಲವಾರು ತೆಗೆದು ಯದ್ವಾತದ್ವಾ ಹಲ್ಲೆ ಮಾಡಿದ್ದಾರೆ. ಈ ವೇಳೆ ಅನಾಸ್ ಓಡಲು ಪ್ರಯತ್ನಿಸಿದ್ದಾರೆ.
ಆಗ ಕಾರಿನಲ್ಲಿ ಬಂದಿದ್ದ ರವೂಫ್, ಮುಸ್ತಾಫ ಯಾನೆ ಅಪ್ಪು ಮತ್ತು ಇತರರು ಅಡ್ಡಗಟ್ಟಿ ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅನಾಸ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಆರೋಪಿಗಳು ಕಾರಿನಿಂದ ಕಾಲ್ಕಿತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳಾದ ಚಾರು, ರವೂಫ್, ಅಕ್ಕಿ, ಮುಸ್ತಾಫ ಮತ್ತಿತರರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.