ಧಾರವಾಡ: ಎಲ್ಲಾ ಕಡೆ ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಬೇಕಾದರೆ ಪೊಲೀಸರ ಕಣ್ಣುತಪ್ಪಿಸಿ ಅಥವಾ ಠಾಣೆಯಿಂದ ಒಂದಷ್ಟು ದೂರದಲ್ಲಿ ಕಳ್ಳತನ ಮಾಡುತ್ತಾರೆ.
ಆದರೆ ಇಲ್ಲೊಬ್ಬ ಕಳ್ಳ ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಪೊಲೀಸರ ವಾಹನವನ್ನೇ ಕದ್ದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆಸಿದೆ.

ಅಣ್ಣಿಗೇರಿ ನಗರದ ನಾಗಪ್ಪ ಹಡಪದ ಬಂಧಿತ ಆರೋಪಿ. ನಾಗಪ್ಪ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದ್ದ ಬೋಲೆರೊ ವಾಹನವನ್ನು ಕಳ್ಳತನ ಮಾಡಿದ್ದಾನೆ.
ಪೊಲೀಸ್ ವಾಹನ ಯಾರು ಮುಟ್ಟುತ್ತಾರೆ ಎಂದು ಸಿಬ್ಬಂದಿ ಕೀ ಅನ್ನು ವಾಹನದಲ್ಲೇ ಬಿಟ್ಟಿದ್ದರು. ನಿತ್ಯ ಬೆಳಗ್ಗೆ ರೌಂಡ್ಸ್ ಹೋಗಲು ವಾಹನವನ್ನು ಸಿಬ್ಬಂದಿ ಬಳಸುತ್ತಿದ್ದರು.ಕೀ ಇದ್ದಿದ್ದನ್ನು ನೋಡಿ ನಾಗಪ್ಪ ಕದ್ದುಕೊಂಡು ಹೋಗಿದ್ದ.

ವಿಚಾರಣೆ ವೇಳೆ ಆತ ಹೇಳಿದ್ದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಪೊಲೀಸ್ ವಾಹನ ಚಲಾಯಿಸಬೇಕೆಂಬುದು ಆತನ ಆಸೆಯಂತೆ. ಇದ್ದಕ್ಕಾಗಿ ಆಗಾಗ ಪೊಲೀಸ್ ಠಾಣೆಗೆ ಬಂದು ಸಂಚು ರೂಪಿಸುತ್ತಿದ್ದನಂತೆ.
ಇದಲ್ಲದೆ ಅಲ್ಲಿಯ ಸಿಬ್ಬಂದಿಯ ಜತೆ ಸ್ನೇಹವನ್ನು ಬೆಳೆಸಿಕೊಂಡಿದ್ದ. ಎಸ್ಐ ರಜೆಯಲ್ಲಿದ್ದ ಸಮಯವನ್ನು ನೋಡಿ ಕಾರು ಎಗರಿಸಿಕೊಂಡು ಹೋಗಿ ಇದೀಗ ಸಿಕ್ಕಿಬಿದ್ದಿದ್ದಾನೆ.
ಈ ಸಂಬಂಧ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಯೆಂದು ತಿಳಿದು ಬಂದಿದೆ.