ಶಿವಮೊಗ್ಗ: ಆರ್.ಎಸ್.ಎಸ್ ಕಾರ್ಯಕರ್ತನನ್ನು ನಡು ರಸ್ತೆಯಲ್ಲಿ ಯದ್ವಾ ತದ್ವಾ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ನಡೆದಿದೆ.
![](http://dtvkannada.in/wp-content/uploads/2022/02/1645417516357.png)
ಈ ರೀತಿಯ ಘಟನೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ [ಸೆಕ್ಷನ್ 144] ಜಾರಿಗೊಳಿಸಲಾಗಿದೆ.
ನಿನ್ನೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಭಜರಂಗದಳದ ಕಾರ್ಯಕರ್ತ ಹರ್ಷ ಎಂಬಾತನನ್ನು ಅಟ್ಟಾಡಿಸಿಕೊಂಡು ಬಂದ ಗುಂಪು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
![](http://dtvkannada.in/wp-content/uploads/2022/02/1645416801548-1.jpg)
ಇದರ ಪರಿಣಾಮವಾಗಿ ಶಿವಮೊಗ್ಗದ ಸೀಗೆಹಟ್ಟಿ ಭಾಗದಲ್ಲಿ ಕಲ್ಲು ತೂರಾಟ ನಡೆದಿದ್ದು, ಮೂರು ಬೈಕ್ ಹಾಗೂ ಒಂದು ಟಾಟಾ ಏಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ತಕ್ಷಣ ಅಗ್ನಿಶಾಮಕದಳದವರು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.
ಸ್ಥಳಕ್ಕೆ ಪೂರ್ವ ವಲಯ ಡಿಐಜಿ ತ್ಯಾಗರಾಜನ್ ಹಾಗೂ ಎಸ್ಪಿ ಲಕ್ಷ್ಮಿಪ್ರಸಾದ್ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಯಾವುದೇ ಆಹಿತಕರ ಘಟನೆ ನಡೆಯದಂತೆ ಬೇರೆ ಜಿಲ್ಲೆಗಳಿಂದಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಯಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಷೋಷಣೆ ಮಾಡಲಾಗಿದೆ ಎಂದು ಡಿಡಿಪಿಐ ರಮೇಶ್ ತಿಳಿಸಿದ್ದಾರೆ.