ಕುಂದಾಪುರ: ಸೌಕೂರು ಹಬ್ಬಕ್ಕಾಗಿ ಬ್ಯಾನರ್ ಅಳವಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಫ್ಲೆಕ್ಸ್ ವಿದ್ಯುತ್‌ತಂತಿಗೆ ತಗುಲಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟು, ಇನ್ನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೌಕೂರು ದೇವಸ್ಥಾನದ ಬಳಿ ಸಂಭವಿಸಿದೆ.
ದುರ್ಘಟನೆಯಲ್ಲಿ ಮೃತಪಟ್ಟ ಯುವಕ ಸೌಕೂರು ನಿವಾಸಿ ಪ್ರಶಾಂತ ದೇವಾಡಿಗ (26) ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಶ್ರೀಧರ ದೇವಾಡಿಗ (45) ಎಂಬಾತ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೆವಸ್ಥಾನದ ವಾರ್ಷಿಕ ಜಾತ್ರೆ ಜರುಗಲಿದ್ದು, ಆ ಪ್ರಯುಕ್ತ ನಿನ್ನೆ ರಾತ್ರಿ ಹಬ್ಬಕ್ಕೆ ಶುಭಕೋರುವ ತಮ್ಮದೇ ಬ್ಯಾನರ್‌ಅನ್ನು ಅಳವಡಿಸುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಪ್ಲೆಕ್ಸ್ ಕಟ್ಟುತ್ತಿದ್ದ ಸ್ಥಳದ ಸಮೀಪವೇ ಟ್ರಾನ್ಸ್‌ಫಾರ್ಮರ್ ತಂತಿ ಹಾದು ಹೋಗಿದ್ದು ಇದರ ಅರವಿಗೆ ಬಾರದೇ ಫ್ಲೆಕ್ಸ್ ಮೇಲಕ್ಕೆತ್ತಿ ಕಟ್ಟುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ತಂತಿ ತಗುಲಿದೆ. ಕೂಡಲೇ ಇಬ್ಬರನ್ನು ರಕ್ಷಿಸುವ ಪ್ರಯತ್ನ ನಡೆಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಶಾಂತ ದೇವಾಡಿಗ ಸಾವನ್ನಪ್ಪಿದರು.
ಇನ್ನು ಗಂಭೀರ ಗಾಯಗೊಂಡ ಶ್ರೀಧರ್‌ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.