ಬೆಳ್ತಂಗಡಿ, ಫೆ.26: ಕನ್ಯಾಡಿಯ ಕೂಲಿ ಕಾರ್ಮಿಕ, ದಲಿತ ಸಮುದಾಯದ ದಿನೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣರಾದ ಪ್ರಕರಣದ ಆರೋಪಿ, ಬಜರಂಗದಳ, ಬಿಜೆಪಿ ಕಾರ್ಯಕರ್ತ ಕಿಟ್ಟಿ ಯಾನೆ ಕೃಷ್ಣ ಡಿ. ಎಂಬಾತನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿ ನಿವಾಸಿ ಪರಿಶಿಷ್ಠ ಜಾತಿಗೆ ಸೇರಿದ ದಿನೇಶ್ ಎಂಬ ಯುವಕನನನ್ನು ಅದೇ ಗ್ರಾಮದ ಕೃಷ್ಣ ಎಂಬ ಬಜರಂಗದಳ ಮುಖಂಡ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ.
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ತನ್ನ ಪುತ್ರನಿಗೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ತಾಯಿ ಪದ್ಮಾವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಆರೋಪಿ ಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆತ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.