ಮಂಗಳೂರು: ನಕಲಿ ಬುರ್ಖಾಧಾರಿ ಮುಸ್ಲಿಂ ವಿದ್ಯಾರ್ಥಿನಿಯ ಪಾತ್ರವನ್ನು ಸೃಷ್ಟಿಸಿ ಎರಡು ಸಮುದಾಯವನ್ನು ಎತ್ತಿಕಟ್ಟುವ, ಅಶಾಂತಿ ಸೃಷ್ಟಿಸಿ ಪ್ರಚೋದನೆಗೊಳಪಡಿಸುವ, ಧರ್ಮವನ್ನು ಅವಮಾನಿಸುವ ಅಪರಾಧ ಮಾಡಿರುವ ಕಿರಿಕ್ ಕೀರ್ತಿ ಯಾನೆ ಕೀರ್ತಿ ಶಂಕರಘಟ್ಟ, ಮಹೇಶ್ ವಿಕ್ರಂ ಹೆಗ್ಡೆ ಮತ್ತು ಅನಾಮಿಕ ಬುರ್ಖಾಧಾರಿ ನಕಲಿ ಮಹಿಳೆಯ ವಿರುದ್ಧ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಫೆ. 18 ರಂದು ಟಿವಿ ವಿಕ್ರಮ (TV VIKRAMA) ಎಂಬ ಅನಧಿಕೃತ ಯೂಟ್ಯೂಬ್ ಅಕೌಂಟ್ ನಲ್ಲಿ ಕಿರಿಕ್ ಕೀರ್ತಿ ಯಾನೆ ಕೀರ್ತಿ ಶಂಕರಘಟ್ಟ ಎಂಬ ವ್ಯಕ್ತಿಯು ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳನ್ನು ಸಂದರ್ಶನ ಮಾಡುವ ವಿಡಿಯೋ ವನ್ನು ಪ್ರಸಾರ ಮಾಡಲಾಗಿದೆ.
ಸದ್ರಿ ವಿಡಿಯೊದ ಮೊದಲಿಗೆ ಚಿಕ್ಕದಾಗಿ ಕಾಲ್ಪನಿಕ ಎಂದು ಬರೆದುಕೊಂಡು ಸಂದರ್ಶನದ ಮಧ್ಯ ಭಾಗದಲ್ಲಿ ನಕಲಿ ಮುಸ್ಲಿಂ ವಿದ್ಯಾರ್ಥಿನಿ ಬುರ್ಖಾ ಮತ್ತು ಹಲ್ಲಿನ ಚಿಕಿತ್ಸೆ ಬಗ್ಗೆ ಹೇಳಲಾದ ಮಾತುಗಳನ್ನು ತುಂಡರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಇದೇ ವಿಡಿಯೋವನ್ನು ಈ ಅನಧಿಕೃತ ಯೂಟ್ಯೂಬ್ ಅಕೌಂಟ್ ನ ಸೃಷ್ಟಿಕರ್ತ ಮಹೇಶ್ ವಿಕ್ರಂ ಹೆಗ್ಡೆ ಕೂಡಾ ಹಂಚಿಕೊಂಡಿದ್ದಾರೆ.
ಈ ವಿಡಿಯೊದಿಂದ ಧರ್ಮನಿಂದನೆ ಆಗಿರುವುದಲ್ಲದೇ, ಎರಡು ಧರ್ಮಗಳ ಮಧ್ಯೆ ಅಪನಂಬಿಕೆ, ಗೊಂದಲ, ಅಸಹಜ ಅಶಾಂತಿ ಉಂಟಾಗಿದೆ.
ಹಿಜಾಬ್ ವಿವಾದ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿರುವ ದಿನಗಳಲ್ಲಿ ಧರ್ಮವನ್ನು ಬಳಸಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ಮಹಿಳೆಯೊಬ್ಬಳಿಗೆ ಬುರ್ಖಾ ತೊಡಿಸಿ ನಕಲಿ ಮುಸ್ಲಿಂ ಮಹಿಳೆಯನ್ನು ಸೃಷ್ಟಿಸಿ ಗಲಭೆ, ಅಶಾಂತಿ ಸೃಷ್ಟಿಸಲು ಪ್ರಚೋದನೆ ಮಾಡಲಾಗಿದೆ. ಈ ಮೂವರು ಆರೋಪಿಗಳನ್ನು ಬಂಧಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ದೂರು ಸಲ್ಲಿಸಿದರು. ಎಸ್.ಡಿ.ಟಿ.ಯು ಸಂಘಟನೆಯ ರಾಜ್ಯ ನಾಯಕ ಶರೀಫ್ ಪಾಂಡೇಶ್ವರ ಉಪಸ್ಥಿತರಿದ್ದರು.