ಪುತ್ತೂರು: ಪುತ್ತೂರಿನ ರಕ್ತನಿಧಿಯಲ್ಲಿ ರಕ್ತದ ಸಂಗ್ರಹ ಕಡಿಮೆ ಇದ್ದುದರಿಂದ ರೋಗಿಗಳಿಗೆ ತುರ್ತು ರಕ್ತ ಪೂರೈಕೆ ಮಾಡಲು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಪಾಪ್ಯುಲರ್ ಫ್ರಂಟ್ ಮೆಡಿಕಲ್ ವಿಭಾಗವು ಪುತ್ತೂರಿನ ರೋಟರಿ ರಕ್ತನಿಧಿಯಲ್ಲಿ ತುರ್ತು ಸಾರ್ವಜನಿಕ ರಕ್ತದಾನ ಶಿಬಿರ
ಹಮ್ಮಿಕೊಂಡಿತ್ತು. ಯಶಸ್ವಿಯಾಗಿ ನಡೆದ ಶಿಬಿರದಲ್ಲಿ 40 ಮಂದಿ ರಕ್ತದಾನ ಮಾಡಿ ಸಹಕರಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಾಬಿರ್ ಅರಿಯಡ್ಕ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕರ್ನಾಟಕ ರಾಜ್ಯಾದ್ಯಂತ ಕಾರ್ಯನಿರ್ವಸುತ್ತಿದ್ದು, ತುರ್ತು ಸೇವೆಗಳಿಗೆ ಸ್ಪಂದಿಸುತ್ತಾ ಬರುತ್ತಾ ಇದೆ. ಯುವಕರನ್ನು ಸಮಾಜಮುಖಿ ಕೆಲಸಗಳಿಗಾಗಿ ಪಾಪ್ಯುಲರ್ ಫ್ರಂಟ್ ಸಜ್ಜುಗೊಳಿಸುತ್ತಾ ಇದೆ. ಸಾರ್ವಜನಿಕರ ಸೇವೆಗೆ ಸದಾ ಸಿದ್ಧ ಇರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ರಕ್ತದಾನದ ಮಹತ್ವದ ಕುರಿತು ವಿವರಿಸಿದ ರೋಟರಿ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್ ಅವರು ಪಿಎಫ್ಐ ಸಂಘಟನೆ ನಮ್ಮ ಬ್ಲಡ್ ಬ್ಯಾಂಕಿನ ಎಲ್ಲ ಅವಶ್ಯಕತೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಾ ಬಂದಿದ್ದಾರೆ. ಯಾವುದೇ ಸಂದರ್ಭದಲ್ಲೂ ಕೂಡ ರಕ್ತದ ಅವಶ್ಯಕತೆ ಬಂದಾಗ ರಕ್ತದಾನ ಮಾಡಿ ನೆರವಾಗುತ್ತಾರೆ. ತುರ್ತು ಸಂದರ್ಭಗಳಲ್ಲಿ ಅವರ ಸೇವೆ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಮೆಡಿಕಲ್ ಉಸ್ತುವಾರಿ ಎಂ.ಎ ರಫೀಕ್, ಪಿಎಫ್ಐ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ, ಇಫಾಝ್ ಬನ್ನೂರು, ಸಫ್ವಾನ್, ಸಾಬಿತ್, ಸಮೀರ್ ಡಿ.ಕೆ ಮತ್ತಿತರರು ಉಪಸ್ಥಿತರಿದ್ದರು.
ಶಾಕಿರ್ ಕ್ಯಾಂಪಸ್ ಸ್ವಾಗತಿಸಿ, ರಫೀಕ್ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.