ಬೆಂಗಳೂರು: ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ ನಡೆಸಿದ ಹೇಯ ಕೃತ್ಯ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಾರ್ಚ್ 9 ರಂದು ನಡೆದಿದೆ.
ಎರಡೂವರೆ ವರ್ಷದ ಪುಟ್ಟ ಮಗುವನ್ನು ಕಚ್ಚಿ ವಿಕೃತಿ ಮೆರೆಯಲಾಗಿದೆ. ಗಾಯಾಳು ಪತ್ನಿ ಮೀನಾಗೆ (23) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೀನಾ ಎಂಬ ಯುವತಿ ಬಾಬು (27) ಎಂಬವರನ್ನು ಎರಡನೇ ಮದುವೆ ಆಗಿದ್ದರು. ಏಳು ವರ್ಷದ ಹಿಂದೆ ವಿಜಯಕಾಂತ ಎಂಬುವವರನ್ನು ವರಿಸಿದ್ದ ಮೀನಾಗೆ 3 ಜನ ಹೆಣ್ಣು ಮಕ್ಕಳಿದ್ದಾರೆ. ಆದರೆ ದುರಾದೃಷ್ಟವಷಾತ್ ಮೂರು ವರ್ಷದ ಹಿಂದೆ ವಿಜಯಕಾಂತ್ ತೀರಿಹೋಗಿದ್ದರು.
ನಂತರ ಮೀನಾಗೆ ಬಾಬು ಎಂಬಾತನ ಪರಿಚಯವಾಗಿತ್ತು. ಆತ ಮದುವೆ ಆಗ್ತೀನಿ ಎಂದು ತಿಳಿಸಿದ್ದ. ಬಳಿಕ, ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು. ಆದರೆ, ಮೀನಾ ಕೂಲಿ ಮಾಡಿ ಕೂಡಿಟ್ಟ ಹಣವನ್ನು ಬಾಬು ಕುಡಿದು ಹಾಳು ಮಾಡ್ತಿದ್ದ ಎಂದು ತಿಳಿದುಬಂದಿದೆ.
ಈ ವೇಳೆ ಜಗಳವಾಗಿ ದುಡ್ಡು ಕೇಳಿದ್ರೆ ಮೈಮೇಲೆ ಡೀಸೆಲ್ ಸುರಿದು ಸತ್ತೋಗುತ್ತೇನೆ ಎಂದು ಮೀನಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆ ಎಂದು ಸ್ಟೌನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ.
ಮೂರು ತಿಂಗಳ ಗರ್ಭಿಣಿ ಆಗಿರುವ ಮೀನಾ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀನಾ ಮೊದಲ ಪತಿಗೆ ಜನಿಸಿದ್ದ ಪುಟ್ಟ ಹೆಣ್ಣು ಮಗುವನ್ನು ಕಚ್ಚಿ ವಿಕೃತಿ ಮೆರೆದಿರುವ ಬಗ್ಗೆಯೂ ಹೇಳಲಾಗಿದೆ.
ಇದೀಗ ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರು ಆರೋಪಿ ಬಾಬುವನ್ನು ಬಂಧಿಸಿದ್ದಾರೆ.
