ಬಂಟ್ವಾಳ: ಬೈಕ್ ನಲ್ಲಿ ಬಂದ ಇಬ್ಬರು ಆಗಂತುಕರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಳೆದು ಪರಾರಿಯಾದ ಘಟನೆ ನಿನ್ನೆ ಬೆಳಿಗ್ಗೆ ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ನಡೆದಿದೆ.
ಈ ಕುರಿತು ಕೈಕುಂಜೆ ಪೂರ್ವ ಬಡಾವಣೆ ನಿವಾಸಿ ಮಹಿಳೆ ಸುಲೋಚನಾ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.
ಸುಲೋಚನಾರವರು ಮನೆಯಿಂದ ಹೊರಟು ಕೈಕುಂಜೆಯಲ್ಲಿ ಹೊಲಿಯಲು ಕೊಟ್ಟ ಬಟ್ಟೆಯನ್ನು ಪಡೆದುಕೊಂಡು ವಾಪಸ್ ಬರುತ್ತಿರುವ ಸಂದರ್ಭದಲ್ಲಿ ಬೆಳಿಗ್ಗೆ ಬಡಾವಣೆಯ ರಸ್ತೆಯಲ್ಲಿ ಎದುರಿಗೆ ಬೈಕೊಂದು ಬಂದಿತ್ತು.
ಅದರಲ್ಲಿ ಇಬ್ಬರು ಅಪರಿಚಿತರು ಇದ್ದು, ಹಿಂಬದಿ ಸವಾರ ತನ್ನ ಕುತ್ತಿಗೆಯಲ್ಲಿದ್ದ ಅಂದಾಜು 1 ಲಕ್ಷ ರೂ ಮೌಲ್ಯದ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದಾರೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ವಿವೇಕಾನಂದ ಮತ್ತವರ ತಂಡ ಕಾರ್ಯಾಚರಣೆ ನಡೆಸಲು ಆರಂಭಿಸಿತು.
ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಹಾಡಹಗಲೇ ಇಂಥ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಎಡೆಮಾಡಿದೆ.
2018ರಲ್ಲಿ ಇದೇ ಮಾದರಿಯ ಘಟನೆ ಕೈಕುಂಜೆಯಲ್ಲಿ ಸಂಜೆಯ ವೇಳೆ ನಡೆದಿದ್ದು, ಅಂದು ಬಿಎಸ್ಸೆನ್ನೆಲ್ ಉದ್ಯೋಗಿಯೊಬ್ಬರು ನಡೆದುಕೊಂಡು ಮನೆಗೆ ಮರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದವರು ಚಿನ್ನದ ಸರ ಸೆಳೆದೊಯ್ದಿದ್ದರು. ಬಳಿಕ ಅವರನ್ನು ಆಗಿನ ಎಸ್ಸೈ ನಂದಕುಮಾರ್ ಮತ್ತವರ ತಂಡ ಬಂಧಿಸಿ, ಸರವನ್ನು ವಶಪಡಿಸಿ ವಾರೀಸುದಾರರಿಗೆ ಮರಳಿಸಿತ್ತು.
