ಮಂಗಳೂರು: ಹಿಜಾಬ್ ಧಾರಣೆಗೆ ಅವಕಾಶ ಇಲ್ಲ ಎನ್ನುವ ಕರ್ನಾಟಕ ಹೈಕೋರ್ಟ್ ಆದೇಶ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದರು ಪ್ರದೇಶ, ಸೆಂಟ್ರಲ್ ಮಾರ್ಕೆಟ್, ಸ್ಟೇಟ್ ಬ್ಯಾಂಕ್, ಎಪಿಎಂಸಿ ಮಾರ್ಕೆಟ್ ಸೇರಿದಂತೆ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಜನಸಂಚಾರ ವಿರಳವಾಗಿತ್ತು. ಮೀನು, ತರಕಾರಿ ಮತ್ತು ಇತರ ವಸ್ತುಗಳ ಮಾರಾಟ ಇಲ್ಲಿ ಹೆಚ್ಚಾಗಿರುತ್ತದೆ.
ಮಂಗಳೂರಿನಲ್ಲಿ ಮೀನು ಮತ್ತು ತರಕಾರಿ ವ್ಯಾಪಾರ ಮಾಡುವ ಬಹುತೇಕರು ಮುಸ್ಲಿಮರೇ ಆಗಿದ್ದಾರೆ. ಬಂದ್ಗೆ ಬೆಂಬಲ ವ್ಯಕ್ತಪಡಿಸಿ ಇವರೆಲ್ಲರೂ ಬಾಗಿಲು ಹಾಕಿದ್ದರಿಂದ ನೀರಸ ವಾತಾವರಣ ನಿರ್ಮಾಣವಾಗಿತ್ತು. ದೈನಂದಿನ ಅಗತ್ಯ ವಸ್ತುಗಳಾದ ಮೀನು ಮತ್ತು ತರಕಾರಿ ಖರೀದಿಸಲು ಸಾಧ್ಯವಾಗದೆ ಜನರು ಪರದಾಡಿದರು.

ಮಂಗಳೂರು ಮತ್ತು ದಕ್ಷಿಣ ಕನ್ನಡದ ವಿವಿಧೆಡೆ ಚಿಕನ್, ಮಟನ್ ಮತ್ತು ಬೀಫ್ ಸ್ಟಾಲ್ಗಳೂ ಬಾಗಿಲು ಹಾಕಿದ್ದವು. ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಉಲ್ಲಾಳ ಪ್ರದೇಶದಲ್ಲಿ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಮುಂಜಾನೆಯಿಂದೇ ಉಲ್ಲಾಳದಲ್ಲಿ ಜನಸಂಚಾರ ವಿರಳವಾಗಿತ್ತು. ಕೇರಳದ ಕಾಸರಗೋಡಿನಿಂದ ಬರುವ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟು ನಡೆಸುವ ಕಲ್ಲಪು ಸಗಟು ಮಾರುಕಟ್ಟೆಯಲ್ಲಿ ಯಾವುದೇ ಚಟುವಟಿಕೆ ನಡೆಯಲಿಲ್ಲ.