dtvkannada

ಬೆಂಗಳೂರು: ಹೈಕೋರ್ಟ್‌ ಆದೇಶಕ್ಕೂ ಮುನ್ನ ಹಿಜಾಬ್‌ ಗೊಂದಲದಿಂದ ಪರೀಕ್ಷೆಗೆ ಗೈರಾದವರಿಗೆ ಮತ್ತೆ ಅವಕಾಶ ಕೊಡಿ ಎಂದು ಬಿಜೆಪಿ ಶಾಸಕ ರಘುಪತಿ ಭಟ್‌ ಮನವಿ ಮಾಡಿದರು.

ವಿಧಾನಸಭೆ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಬಂದ ನಂತರ ಅದನ್ನು ಧಿಕ್ಕರಿಸಿ ಪ್ರತಿಭಟನೆ ಮಾಡುತ್ತಿರುವವರ ಮೇಲೆ ಕ್ರಮ ಆಗಬೇಕು. ಜತೆಗೆ ಕಳೆದ ಬಾರಿ ಪರೀಕ್ಷೆಗೆ ಅನೇಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈಗ ಹಿಜಾಬ್ ತೆಗೆದಿಟ್ಟು ಹೋಗಲು ಮುಂದಾಗುವ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ರಘುಪತಿ ಭಟ್ ಅವರನ್ನು ಸಮರ್ಥಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ, ಬಂದ್ ಮಾಡುವುದು ಸರಿಯಲ್ಲ ಎಂದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದರ ಜೊತೆಗೆ ಶಾಂತಿಯುತವಾಗಿ ಬಂದ್, ಪ್ರತಿಭಟನೆ ಮಾಡುವುದು ಅವರ ಸಂವಿಧಾನಾತ್ಮಕ ಹಕ್ಕು. ಅದನ್ನು ಸರ್ಕಾರ ಹೇಗೆ ತಡೆಯಲು ಸಾಧ್ಯ? ಬಂದ್, ಪ್ರತಿಭಟನೆ ಮಾಡಲು ಬಿಡಿ ಎಂದು ಸಿದ್ದರಾಮಯ್ಯ ಹೇಳಿದರು.

ಇನ್ನೊಂದೆಡೆ ವಿಪಕ್ಷ ಉಪನಾಯಕ ಯು.ಟಿ‌.ಖಾದರ್ ಮಧ್ಯಪ್ರವೇಶಿಸಿ, ನ್ಯಾಯಾಲಯಕ್ಕೆ ಅಗೌರವ ತೋರಿಸಬೇಕು ಎಂಬ ಕಾರಣಕ್ಕೆ ಬಂದ್‌ಗೆ ಕರೆ ಕೊಟ್ಟಿಲ್ಲ. ಅಸಮಾಧಾನದ ಕಾರಣಕ್ಕೆ ಧಾರ್ಮಿಕ ಮುಖಂಡರು ಬಂದ್‌ಗೆ ಕರೆ ಕೊಟ್ಟಿದ್ದಾರೆ ಎಂದರು.‌ ಈ ವೇಳೆ ಮಾತನಾಡಿದ ಸಿ.ಟಿ.ರವಿ, ಇದರಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಮಹಾ ಪಾಪದ ಕೆಲಸ‌. ಶಾಲೆಗಳಲ್ಲಿ ಸಮವಸ್ತ್ರ ಏಕೆ ಇರಬೇಕು‌ ಎಂಬುದರ ಬಗ್ಗೆ ಕೋರ್ಟ್‌ನಲ್ಲಿ ಹತ್ತು ದಿನ ವಿವರವಾದ ವಿಚಾರಣೆ ನಡೆದು ಬಳಿಕ ತೀರ್ಪು ಕೊಡಲಾಗಿದೆ. ಅದನ್ನು ಧಿಕ್ಕರಿಸಿ ಪ್ರತಿಭಟನೆ, ಬಂದ್ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಶಾಸಕ ರಘುಪತಿ ಭಟ್‌ ಮನವಿ ಕುರಿತು ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಹಿಜಬ್ ಗೊಂದಲದಿಂದಾಗಿ ಹೈಕೋರ್ಟ್ ಆದೇಶಕ್ಕೂ ಮುನ್ನ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಆ ವಿದ್ಯಾರ್ಥಿಗಳಿಗೆ ಅವಕಾಶ ಕೊಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.

By dtv

Leave a Reply

Your email address will not be published. Required fields are marked *

error: Content is protected !!