ಬೆಂಗಳೂರು: ಶಾಲಾ ವಿದ್ಯಾರ್ಥಿಯೊಬ್ಬಳು ರಸ್ತೆ ದಾಟುತ್ತಿದ್ದಾಗ ಬಾಲಕಿ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದೆ.
ಮೃತಪಟ್ಟ ವಿದ್ಯಾರ್ಥಿನಿ ಅಕ್ಷಯ(೧೩) ಎಂದು ತಿಳಿದು ಬಂದಿದೆ.9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಕ್ಷಯ ಡಿವೈಡರ್ ಮೇಲೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಸದ ಲಾರಿ ಬಲಿ ಪಡೆದಿದೆ.
ಘಟನೆಯಲ್ಲಿ ಸುಮಾರು 6ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೃತ್ಯವೆಸಗಿದ ಕಸದ ಲಾರಿ ಚಾಲಕ ನಾಪತ್ತೆಯಾಗಿದ್ದು, ಘಟನೆ ಸಂಬಂಧ ಆರ್.ಟಿ.ನಗರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ ಮಳೆಯಾಗಿದ್ದರಿಂದ ಹೆಬ್ಬಾಳ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿತ್ತು, ಪಾದಚಾರಿಗಳು ನಡೆದಾಡಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆ ಡಿವೈಡರ್ ದಾಟಿ ರೋಡ್ ಕ್ರಾಸ್ ಮಾಡಲು ವಿದ್ಯಾರ್ಥಿನಿ ಅಕ್ಷಯಾ ಮುಂದಾಗಿದ್ದಳು.
ಈ ವೇಳೆ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ರಕ್ತಸ್ರಾವಗೊಂಡು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.