ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಬೆಳವಣಿಗೆಗಳು ಕಂಡು ಬರುತ್ತಿದ್ದು, ನಾಗರಿಕರ ಜೀವನೋಪಾಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುವ ಇಂತಹ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.
ಬಿಜೆಪಿ-ಸಂಘಪರಿವಾರದ ನಾಯಕರ ಒತ್ತಡದಿಂದ ಇತ್ತೀಚಿಗೆ ಕಾಪು ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುವ ಹೊಸದಾದ ಪ್ರವೃತ್ತಿಗೆ ನಾಂದಿ ಹಾಡಲಾಯಿತು. ನಂತರ ಇದು ದಕ್ಷಿಣ ಕನ್ನಡ ಜಿಲ್ಲೆಯ ಇತರ ಕಡೆಗಳಿಗೂ ಮೆಲ್ಲನೇ ವ್ಯಾಪಿಸುತ್ತಿದೆ. ಸಂಘಪರಿವಾರವು ಎಲ್ಲೋ ಮೂಲೆಯಲ್ಲಿ ನಡೆಸುತ್ತಿದ್ದ ಇಂತಹ ದುಷ್ಟ ಸಂಚುಗಳನ್ನು ಇದೀಗ ವ್ಯಾಪಕಗೊಳಿಸುವ ಪ್ರಯತ್ನ ನಡೆಸುತ್ತಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು-ಮುಸ್ಲಿಮರು ತಲೆತಲಾಂತರಗಳಿಂದ ಅನ್ಯೋನ್ಯತೆಯಿಂದ ಜೀವಿಸುತ್ತಾ ಬಂದಿದ್ದಾರೆ. ಪರಸ್ಪರರ ಜಾತ್ರೆ, ಸಮಾರಂಭಗಳಲ್ಲಿ ವ್ಯಾಪಾರ ವಹಿವಾಟುಗಳನ್ನೂ ನಡೆಸುತ್ತಿದ್ದಾರೆ. ಹಿಂದು-ಮುಸ್ಲಿಮರಲ್ಲಿನ ತಳ ವರ್ಗದ ಹಲವಾರು ಕುಟುಂಬಗಳು ಇದೇ ಕಸುಬನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿವೆ. ಸಂಘಪರಿವಾರವು ಇದೀಗ ಮುಸ್ಲಿಮ್ ವ್ಯಾಪಾರಿಗಳ ಮೇಲೆ ಅಸಹಿಷ್ಣುತೆ ತೋರುತ್ತಾ ತನ್ನ ಕೋಮು ಅಜೆಂಡಾವನ್ನು ಆಳವಾಗಿ ಬಿತ್ತಲು ಪ್ರಯತ್ನಿಸುತ್ತಿದೆ. ಕೇವಲ ಜಾತ್ರೆ ಸಮಾರಂಭಗಳಲ್ಲದೇ, ಇತರ ವ್ಯಾಪಾರ ವಹಿವಾಟುಗಳಲ್ಲೂ ಉಭಯ ಸಮುದಾಯಗಳು ಪರಸ್ಪರರನ್ನು ನೆಚ್ಚಿಕೊಂಡಿದ್ದಾರೆ. ಇವುಗಳ ಮಧ್ಯೆ ಪ್ರತ್ಯೇಕಿಸಲಾಗದ ಅವಿನಾಭಾವ ಸಂಬಂಧವಿದೆ. ಹೀಗಿರುವಾಗ ಸಂಘಪರಿವಾರದ ಶಕ್ತಿಗಳು ಕೋಮು ಧ್ರುವೀಕರಣದ ಭಾಗವಾಗಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಮೂಲಕ ಪರಸ್ಪರರನ್ನು ವಿಭಜಿಸುವ ಪಿತೂರಿಯಲ್ಲಿ ತೊಡಗಿದ್ದಾರೆ.
ಸಂವಿಧಾನದ ವಿಧಿ 19 ಜೀವನೋಪಾಯಕ್ಕೆ ಸಂಬಂಧಿಸಿದ ವಿಚಾರವನ್ನು ಹೇಳುತ್ತದೆ. ಇದರ ಪ್ರಕಾರ, ಭಾರತ ಪ್ರತಿಯೋರ್ವ ನಾಗರಿಕನು ಯಾವುದೇ ಕಾನೂನುಬದ್ಧ ವೃತ್ತಿ, ವ್ಯಾಪಾರ ಅಥವಾ ಉದ್ಯಮ ನಡೆಸುವ ಮೂಲಭೂತ ಹಕ್ಕನ್ನು ಹೊಂದಿರುತ್ತಾನೆ. ಅಂದರೆ ವ್ಯಕ್ತಿಯ ಜೀವನೋಪಾಯದ ವೃತ್ತಿಗೆ ಅಡ್ಡಿ ಆತಂಕ ಉಂಟು ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜಿಲ್ಲಾಡಳಿತವು ಕೂಡಲೇ ಮಧ್ಯ ಪ್ರವೇಶಿಸಿ ವ್ಯಾಪಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು. ವ್ಯಾಪಾರಿಗಳ ಸಾಂವಿಧಾನಿಕ ಹಕ್ಕನ್ನು ಕಸಿಯುವ ಷಡ್ಯಂತ್ರಗಳಿಗೆ ಪೊಲೀಸ್ ಇಲಾಖೆ ಕೂಡಲೇ ಕಡಿವಾಣ ಹಾಕಬೇಕು. ಹಕ್ಕಿನ ಉಲ್ಲಂಘನೆಗೆ ಪ್ರಚೋದನೆ ನೀಡುವ ಮತ್ತು ವ್ಯಾಪಾರಿಗಳಿಗೆ ಬೆದರಿಕೆ ನೀಡುವ ಸಂಘಪರಿವಾರದ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.