ಬೆಂಗಳೂರು: ದೇವಾಲಯ ವ್ಯಾಪ್ತಿ, ಜಾತ್ರೆಗಳಲ್ಲಿ ಹಿಂದುಯೇತರರಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಪ್ರಸ್ತಾಪ ಮಾಡಿ ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಬಗ್ಗೆ, ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ವಿಷಯ ಪ್ರಸ್ತಾಪ ಮಾಡಿದ್ದಾರೆ. ಬ್ಯಾನರ್ ಹಾಕಿದವರು ಹೇಡಿಗಳು, ಕ್ರೂರಿಗಳು. ಹೆಸರು ಹಾಕದೆ ಕೆಲವರು ಭಿತ್ತಿಪತ್ರಗಳನ್ನು ಅಳವಡಿಸುತ್ತಿದ್ದಾರೆ. ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಭಿತ್ತಿಪತ್ರ ಅಳವಡಿಸುವುದು ಪೊಲೀಸರಿಗೆ ಗೊತ್ತಿಲ್ಲವಾ? ಪೊಲೀಸರು ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಯುತ್ತೆ. ಸಮಾಜದಲ್ಲಿ ವೈಮನಸ್ಸು ಸೃಷ್ಟಿಗೆ ಅವಕಾಶ ನೀಡಬಾರದು. ಭಿತ್ತಿಪತ್ರ ಹಾಕಿದವರ ಉದ್ದೇಶವೇನೆಂದು ಬಯಲಾಗಬೇಕು. ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯು.ಟಿ. ಖಾದರ್ ಹೇಳಿದ್ದಾರೆ. ಖಾದರ್ ಮಾತಿಗೆ ಆಡಳಿತ ಪಕ್ಷದ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ.
ಒಂದು ವರ್ಗದ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿದ್ದಾರೆ. ಇದು ಸಮಾಜಕ್ಕೆ ಆಘಾತಕಾರಿ. ಇತಿಹಾಸ ಗೊತ್ತಿಲ್ಲದವರು ಭಿತ್ತಿಪತ್ರಗಳನ್ನು ಹಾಕುತ್ತಿದ್ದಾರೆ. ಒಂದು ಸಮುದಾಯಕ್ಕೆ ಬಹಿಷ್ಕಾರ ಹಾಕುವುದು ಸರಿಯಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗುವುದಿಲ್ಲ. ನಮ್ಮ ಸಾಂವಿಧಾನಿಕ ಹಕ್ಕನ್ನು ನಮಗೆ ಕೊಡಿ ಎಂದು ವಿಧಾನಸಭೆಯಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಾತಾವರಣ ಮತ್ತೆ ಕೆಡಿಸಬಾರದು. ಸಾಮರಸ್ಯ ಪರಂಪರೆ ಇತಿಹಾಸ ಇದೆ. ಅದನ್ನು ಕಾಪಾಡದಿದ್ರೆ ಮುಂದಿನ ಪೀಳಿಗೆಗೆ ಕಷ್ಟವಾಗಲಿದೆ. ಒಂದು ವರ್ಗದ ವ್ಯಾಪಾರಿಗಳು ಬರಬಾರದು ಅಂತ ಪೋಸ್ಟರ್ ಹಾಕುವುದು ಸಮಾಜಕ್ಕೆ ಆಘಾತ. ಇದು ಜಾತ್ರೆ, ಉರೂಸ್ ಸಮಯ. ಯಾವ ಸಂಘಟನೆ ಮಾಡ್ತಿದೆಯೋ ಅವರಿಗೆ ಇತಿಹಾಸ ಗೊತ್ತಿಲ್ಲ. ಮಾರಿಗುಡಿ, ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ ಸ್ಥಾಪಿಸಿರೋದೇ ಮುಸ್ಲಿಂ ಜನಾಂಗ. ಜಾನಪದ ಹಾಡುಗಳಲ್ಲಿ ಮುಸ್ಲಿಮರು ಹೇಗೆ ಜೊತೆಗಿದ್ರು ಅನ್ನೋ ಇತಿಹಾಸ ಇದೆ. ನಾವು ಹಾಳು ಮಾಡಿದ್ರೆ ದ್ರೋಹವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಏನಾಗುತ್ತೋ ನನಗಂತೂ ಗೊತ್ತಿಲ್ಲ: ಹೆಚ್ಡಿ ಕುಮಾರಸ್ವಾಮಿ ಆತಂಕ
ಈ ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿ, ಅದರ ಅಂಗಸಂಸ್ಥೆಗಳು ಮಾಡ್ತಿರುವ ಕೆಲಸ. ಭಾವನಾತ್ಮಕ ವಿಚಾರ ಸಾರ್ವಜನಿಕವಾಗಿ ಹೊರಗೆ ತಂದು ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಇದು ಆರಂಭವಷ್ಟೇ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅಭಿವೃದ್ಧಿ ವಿಚಾರ ಚರ್ಚೆಗೆ ಬಿಜೆಪಿಯ ಬಳಿ ಸರಕೇ ಇಲ್ಲ. ಉತ್ತರ ಭಾರತದ ಚುನಾವಣಾ ವಿಚಾರ ಪರಿಚಯಿಸ್ತಿದ್ದಾರೆ. ಕರ್ನಾಟಕದಲ್ಲಿಯೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ನನಗಂತೂ ಗೊತ್ತಿಲ್ಲ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದೀಗ ಅದಕ್ಕೆ ಬೆಂಕಿ ಇಡುವ ಕೆಲಸ ಆರಂಭವಾಗಿದೆ. ಕೋಮು ಸಂಘರ್ಷಕ್ಕೆ ಇದೆಲ್ಲ ಮಾಡುತ್ತಿದ್ದಾರೆ. ಕರಾವಳಿ ಸಂಘರ್ಷವನ್ನು ಇಡೀ ರಾಜ್ಯಕ್ಕೆ ಹಬ್ಬಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನು ಏನಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆ: ಸಿಎಂ ಬೊಮ್ಮಾಯಿ
ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನ ವ್ಯಾಪ್ತಿಯಲ್ಲಿ ನಿರ್ಬಂಧ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ, ಖಾದರ್ರಿಂದ ಚರ್ಚೆ ನಡೆದಿದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಖಾದರ್ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ, ಹಾಗೂ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದ ಜಾಗಕ್ಕೆ ತೆರಳಿ ಮನವಿ ಮಾಡಿಕೊಂಡಿದ್ದಾರೆ.
ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನಿರ್ಬಂಧವನ್ನು ದುರುದ್ದೇಶದಿಂದ ಮಾಡಿದ್ದರೆ ಸರ್ಕಾರ ಅದನ್ನ ತಡೆಯಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಕಾನೂನು ಏನಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆ ಎಂದು ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದಾರೆ.
ಬಿಜೆಪಿ ಸರ್ಕಾರ ಬಂದಾಗಲೇ ಈ ರೀತಿ ಆಗುವುದು ಏಕೆ?: ಎಂಎಲ್‌ಸಿ ಸಲೀಂ ಅಹ್ಮದ್
ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಎಂಎಲ್‌ಸಿ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ. ಎಲ್ಲಿ ಬೇಕಾದರೂ ಹೋಗಿ ವ್ಯಾಪಾರ ಮಾಡಬಹುದು. ಹೀಗೆಂದು ಭಾರತದ ಸಂವಿಧಾನದಲ್ಲಿ ಹೇಳಲಾಗಿದೆ. ಆದ್ರೆ ಕೆಲ ಸಂಘಟನೆಗಳು ಬ್ಯಾನರ್ ಹಾಕಿದ್ದು ದುರ್ದೈವ. ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಸಿಎಂ ತಕ್ಷಣ ಮಧ್ಯಪ್ರವೇಶ ಮಾಡಬೇಕು. ಬಿಜೆಪಿ ಸರ್ಕಾರ ಬಂದಾಗಲೇ ಈ ರೀತಿ ಆಗುವುದು ಏಕೆ? ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಪಾಲಿಸಬೇಕು. ಕೆಲವರು ಮನೆಯಲ್ಲಿದ್ದು ಅಸಮಾಧಾನ ಹೊರಹಾಕಿದ್ದಾರೆ. ಷಡ್ಯಂತ್ರ ಮಾಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.