ಮಂಗಳೂರು: ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆಡಳಿತ ಮಂಡಳಿ ನಿಷೇಧ ಹೇರಿಲ್ಲ. ಈ ನಿಷೇಧದ ವಿವಾದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ದೇವಸ್ಥಾನ ವಠಾರದಲ್ಲಿ ವ್ಯಾಪಾರ ನಿಷೇಧದ ಬಗ್ಗೆ ಬ್ಯಾನರ್ ಹಾಕುವುದಕ್ಕೆ ಅವಕಾಶ ಇಲ್ಲ.
ದೇವಸ್ಥಾನದ ಹೊರಭಾಗದಲ್ಲಿ ಯಾರು ಬ್ಯಾನರ್ ಹಾಕಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪ್ರತಿವರ್ಷ ಇಲ್ಲಿ ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದರು, ಆದರೆ ಈ ಬಾರಿ ಮುಸ್ಲಿಂ ಬಂದಿಲ್ಲ. ಇದಕ್ಕೆ ಕಾರಣ ಏನು ಅಂತಾ ಗೊತ್ತಿಲ್ಲ.
ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಕಾರಣ ಅಲ್ಲ. ದೇವಸ್ಥಾನದ ಆಡಳಿತ ಮಂಡಳಿ ಎಂದೂ ನಿಷೇಧ ಹಾಕಿಲ್ಲ. ಮುಸ್ಲಿಂ ವ್ಯಾಪಾರಿಗಳು ಬಂದರೂ ಹಿಂದೆ ಕಳುಹಿಸುವುದಿಲ್ಲ. ಆದರೆ ಅವರಿಗೆ ತೊಂದರೆ ಆದರೆ ದೇವಸ್ಥಾನ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಎಂದೂ ತಾರತಮ್ಯ ಮಾಡುವುದಿಲ್ಲ. ಕೆಲವರು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಮನವಿ ನೀಡಿದ್ದರು.
ಆದರೆ ಈ ವಿಚಾರದಲ್ಲಿ ನಮ್ಮ ನಿರ್ಧಾರವನ್ನು ಅವರಿಗೆ ಸ್ಪಷ್ಟಪಡಿಸಿದ್ದೇವೆ. ದೇವರ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದರು.
ಈ ಬಗ್ಗೆ ಮಾತನಾಡಿರುವ ಮಾಜಿ ಮೊಕ್ತೇಸರ ಹರಿಕೃಷ್ಣ ಪುನರೂರು, ಈ ದೇವಸ್ಥಾನಕ್ಕೆ ಕೈ ಮುಗಿಯಲು ಮುಸ್ಲಿಂ, ಕ್ರೈಸ್ತರು ಬರುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ನಾವೇ ಜಗಳವನ್ನು ಎಳೆಯಬಾರದು. ಈ ಕ್ಷೇತ್ರ 32 ಗ್ರಾಮಗಳಿಗೆ ಸಂಬಂಧಪಟ್ಟ ದೇವಸ್ಥಾನವಾಗಿದೆ.
ನಾವೇ ಕಾಲು ಕರೆದು ಜಗಳಕ್ಕೆ ಹೋಗಬಾರದು ಎಂದರು. ಮತಾಂತರ ಮಾಡಿದರೆ ಪ್ರತಿಭಟನೆ ಮಾಡಬಹುದು, ಆದರೆ ಸೌಹಾರ್ದಯುತವಾಗಿ ಬಾಳಲು ಅಡ್ಡಿ ಮಾಡಬಾರದು. ಬಪ್ಪ ಬ್ಯಾರಿ ಎಂಬ ಮುಸ್ಲಿಮರು ಕ್ಷೇತ್ರವನ್ನು ಜಿರ್ಣೋದ್ಧಾರ ಮಾಡಿದ ಇತಿಹಾಸವಿದೆ. ಕೆಲವರು ಸೌಹಾರ್ದತೆಗೆ ವಿರೋಧಕ್ಕೆ ವ್ಯಕ್ತಪಡಿಸುತ್ತಿದ್ದಾರೆ.
ಕೆಲಸ ಮಾಡಿ ಬದುಕುವುದಕ್ಕೂ ಜಾತಿ ನೋಡಬಾರದು. ಮತಾಂತರ ಮಾಡಿದರೆ ಅವರನ್ನು ಪ್ರಶ್ನೆ ಮಾಡಬಹುದು. ಆದರೆ ಬದುಕಲು ಅಡ್ಡಗಾಲು ಹಾಕುವುದು ಸರಿಯಲ್ಲ. ಯಾರೇ ಆಗಲಿ ವ್ಯಾಪಾರಕ್ಕೆ ಅಡ್ಡಿ ಮಾಡಬಾರದು ಎಂದು ತಿಳಿಸಿದ್ದಾರೆ.