ಪುತ್ತೂರು: ಕರಾವಳಿಯಲ್ಲಿ ಹಿಂದೂಯೇತರರಿಗೆ ದೇವಸ್ಥಾನಗಳ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಿರ್ಬಂಧ ವಿಚಾರ-ವಿವಾದ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಕರಾವಳಿಯಲ್ಲಿ ಆರಂಭವಾದ ಈ ವಿವಾದ ಇದೀಗ ಮಲೆನಾಡು, ಬೆಂಗಳೂರಿಗೂ ಕಾಲಿಟ್ಟಿದೆ.
ಈ ಮಧ್ಯೆ ವಿವಾದ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮುಸ್ಲಿಮರ ಜೊತೆ ದೈನಂದಿನ ವ್ಯವಹಾರ ಮಾಡುವುದಿಲ್ಲ ಎಂಬ 32 ಅಂಗಡಿಗಳ ಹೆಸರುಗಳಿರುವ ಒಕ್ಕಣೆಯ ಬರಹಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಾದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ಬಗ್ಗೆ ಉಪ್ಪಿನಂಗಡಿ ವರ್ತಕ ಸಮುದಾಯ ಪೊಲೀಸರಿಗೆ ದೂರು ನೀಡಿದೆ.
ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ:
“ಹಿಂದೂ ವರ್ತಕರ ಒಕ್ಕೂಟ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೃಢ ಹಾಗೂ ಧೈರ್ಯಶಾಲಿ ನಿರ್ಣಯ ಕೈಗೊಂಡಿದ್ದೇವೆ, ಈ ಕೆಳಗಿನ ಅಂಗಡಿಗಳ ಮಾಲಕರಾದ ನಾವುಗಳು ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದು, ನಮ್ಮ ಅಂಗಡಿಗಳಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ, ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ” ಎಂಬ ಬರಹದ ಕೆಳಗೆ ಒಟ್ಟು 32 ಅಂಗಡಿಗಳ ಹೆಸರುಗಳನ್ನು ನಮೂದಿಸಿ ಬರೆದ ವಾಟ್ಸಪ್ ಮೆಸೇಜ್ ಪುತ್ತೂರು ತಾಲೂಕಿನಲ್ಲಿ ಹರಿದಾಡುತ್ತಿದೆ.
ಮುಸ್ಲಿಮರ ಜೊತೆ ದೈನಂದಿನ ವ್ಯವಹಾರ ಮಾಡುವುದಿಲ್ಲ ಎಂಬ ವಾಟ್ಸಪ್ ಬರಹಕ್ಕೆ ಸಂಬಂಧಿಸಿ ನೊಂದ ವರ್ತಕರು ಪೊಲೀಸ್ ಮೆಟ್ಟಲೇರಿದ್ದಾರೆ.
ಇಂದು ಬೆಳಗ್ಗೆಯಿಂದ ಉಪ್ಪಿನಂಗಡಿ ಪೇಟೆಯ 32 ಅಂಗಡಿಗಳ ಹೆಸರುಗಳಿರುವ ಒಕ್ಕಣೆಯ ಬರಹಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಾದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಉಪ್ಪಿನಂಗಡಿಯ 32 ವರ್ತಕರು ಪುತ್ತೂರು ಡಿವೈಎಸ್ಪಿ ಗಾನಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ಸಮಾಜದ ಎಲ್ಲಾ ಮಂದಿಯೂ ನಮ್ಮಲ್ಲಿ ಗ್ರಾಹಕರಾಗಿದ್ದು, ವ್ಯಾಪಾರಿ ಧರ್ಮ ಪರಿಪಾಲನೆಯೊಂದಿಗೆ ವ್ಯವಹಾರ ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ವ್ಯಾಪಾರ ಮಳಿಗೆಯ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಸಂಘರ್ಷವನ್ನು ಮೂಡಿಸಲೆತ್ನಿಸಿದ ದುರ್ಷರ್ಮಿಯನ್ನು ಪತ್ತೆ ಹಚ್ಚುವಂತೆ ಮನವಿ ಮಾಡಲಾಗಿದೆ.