ಬಂಟ್ವಾಳ: ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಲೆಂದು 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಹೋಗುವ ವೇಳೆ ದಾರಿ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳೂರು ಹೊರವಲಯದ ಪಡೀಲ್ ನ ಅಡ್ಯಾರ್ ಕಣ್ಣೂರು ಬಳಿ ನಡೆದಿದೆ.

ವೇಣೂರು ನಿವಾಸಿ ರಮೇಶ್ ಅವರ ಪತ್ನಿ ಗೌರಮ್ಮ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.
ಗೌರಮ್ಮನವರಿಗೆ ಇಂದು ಬೆಳಗ್ಗೆ ಹೆರಿಗೆ ನೋವು ಉಂಟಾದ ಹಿನ್ನೆಲೆ ಡೆಲಿವರಿಗೆಂದು ಬೆಳ್ತಂಗಡಿಯಿಂದ ಒಮ್ನಿ ಕಾರಿನಲ್ಲಿ ಬಂಟ್ವಾಳದ ಪುಂಜಾಲಕಟ್ಟೆ ವರೆಗೆ ಕರೆದುಕೊಂಡು ಬರಲಾಗಿದೆ.

ಆ ಬಳಿಕ ಅವರನ್ನು 108 ಅಂಬ್ಯುಲೆನ್ಸ್ ನ ಮೂಲಕ ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲು ಹೋಗುತ್ತಿದ್ದಂತೆ ದಾರಿ ಮಧ್ಯೆ ಕಣ್ಣೂರು ಎಂಬಲ್ಲಿ ನೋವು ಹೆಚ್ಚಾಗಿ ಹೆರಿಗೆಯಾಗಿದೆ.
ತಕ್ಷಣ ಅಂಬುಲೆನ್ಸ್‌ನಲ್ಲಿದ್ದ ಆರೋಗ್ಯ ಸಿಬ್ಬಂದಿ ಉಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಹೆರಿಗೆ ಮಾಡಲಾಯಿತು. ಸದ್ಯ ತಾಯಿ ಮಗುವನ್ನು ಲೇಡಿಗೋಶನ್ ಆಸ್ಪತ್ರೆಗೆ ಸೇರಿಸಲಾಗಿದ್ದು ಆರೋಗ್ಯದಿಂದ ಇದ್ದಾರೆ. ಚಾಲಕ ಜಗನ್ನಾಥ ಶೆಟ್ಟಿ ಅವರು ಸಹಕಾರ ನೀಡಿದ್ದಾರೆ.