ಧಾರವಾಡ: ದೇವಾಲಯದ ಆವರಣದಲ್ಲಿದ್ದ ಮುಸ್ಲಿಮ್ ವ್ಯಾಪಾರಿಗಳಿಗೆ ಸೇರಿದ ಅಂಗಡಿಗಳನ್ನು ಧ್ವಂಸಗೊಳಿಸಿದ ಕೇಸರಿ ಶಾಲುಗಳನ್ನು ಹಾಕಿದ ಯುವಕರು, ಹೊಟ್ಟೆಗೆ ತಿನ್ನುವ ಕಲ್ಲಂಗಡಿಯನ್ನು ಎಸೆದು ಧ್ವಂಸ ಗೊಳಿಸಿರುವ ಅಮಾನವೀಯ ಘಟನೆ ನಡೆದಿದೆ.
ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದಾರೆ.
ಘಟನೆಯಿಂದ ನಷ್ಟ ಅನುಭವಿಸಿದ ಹಿಂದೂಯೇತರ ವ್ಯಾಪಾರಿ ನಬಿಸಾಬ್, ನೋಡ ನೋಡುತ್ತಿದ್ದಂತೆಯೇ ಎಲ್ಲಾ ಒಡೆಯುತ್ತ ಬಂದರು. ಅವರು 8-10 ಜನ ಇದ್ದರು. ನಾನೊಬ್ಬನೇ ಇದ್ದಿದ್ದರಿಂದ ಏನೂ ಮಾಡಲಾಗಲಿಲ್ಲ. 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ತೆಗೆದುಕೊಂಡು ಬಂದಿದ್ದೆ. ಅದರಲ್ಲಿ 1 ಕ್ವಿಂಟಾಲ್ ಮಾತ್ರ ಮಾರಾಟವಾಗಿತ್ತು ಎಂದು ಮರುಗಿದರು.
ನಾನು ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಕಳೆದ ವಾರ ಇಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಬೇಡಿ ಎಂದಿದ್ದರು. ಮುಂದಿನ ವಾರವೇ ದೇವಸ್ಥಾನದ ಜಾತ್ರೆ ಇತ್ತು. ಜಾತ್ರೆಯ ಬಳಿಕ ಹಿಂದೂಯೇತರ ಅಂಗಡಿಗಳನ್ನು ಇಲ್ಲಿ ಇಡಬೇಕಾ, ಬೆಡವಾ ಎಂದು ನಿರ್ಧಾರ ಆಗಬೇಕಿತ್ತು. ಅಷ್ಟರಲ್ಲಿ ಈ ಗಲಾಟೆ ನಡೆಸಲಾಗಿದೆ. ಮತ್ತೊಂದು ಕಡೆ ದೇವಸ್ಥಾನದ ಆಡಳಿತ ಮಂಡಳಿ ಎಲ್ಲ ಪರ್ಯಾಯಸ್ಥರ ಸಭೆ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಪರ್ಯಾಯಸ್ಥರು, ಶನಿವಾರ ಯಾವಾಗಲೂ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಆ ಕಡೆ ಗಲಾಟೆ ನಡೆದಿರುವ ಬಗ್ಗೆ ಲಕ್ಷ್ಯ ಕೊಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಭೆ ಮಾಡಿ ಏನಾಗಿದೆ ಎಂದು ಮಾಹಿತಿ ಕೊಡುತ್ತೇನೆ ಎಂದರು.
ಕೇಸರಿ ಶಾಲು ಧರಿಸಿ ದೇವಸ್ಥಾನದ ಆವರಣಕ್ಕೆ ಆಗಮಿಸಿ ಅಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದ ಮುಸ್ಲಿಮ್ ವ್ಯಾಪಾರಿಗಳಿಗೆ ಸೇರಿದ ಅಂಗಡಿಗಳಿಗೆ ನುಗ್ಗಿ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗಳಿಗೆ ಚೆಲ್ಲಿ ಚೆಲ್ಲಾಪಿಲ್ಲಿ ಮಾಡಿದ ಮಾನವೀಯ ಸತ್ತ ಗೂಂಡಾಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ