dtvkannada

ಪುಣೆ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಶನಿವಾರದ ನಡೆದ ಐಪಿಎಲ್‌ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್‌ ಅನ್ನು ಸೋಲಿಸಿದೆ. ಇಲ್ಲಿಗೆ ಬೆಂಗಳೂರು ತಂಡದ ಒಟ್ಟು ಗೆಲುವಿನ ಸಂಖ್ಯೆ 3ಕ್ಕೇರಿದೆ, ಕೇವಲ 1 ಪಂದ್ಯವನ್ನು ಸೋತಿದೆ.

ಮುಂಬೈ ದುರದೃಷ್ಟ ಈ ಪಂದ್ಯದಲ್ಲೂ ಮುಂದುವರಿಯಿತು. ಮುಂಬೈ ತಂಡ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತು ಹೋಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟಿಗೆ 151 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಬೆಂಗಳೂರು 18.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಬೆಂಗಳೂರು ಪರ ಆರಂಭಿಕ ಅನುಜ್‌ ರಾವತ್‌ (66 ರನ್‌, 47 ಎಸೆತ) ಅತ್ಯುತ್ತಮವಾಗಿ ಆಡಿದರು. ಅನಂತರ ತಂಡವನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದು ಮಾಜಿ ನಾಯಕ ವಿರಾಟ್‌ ಕೊಹ್ಲಿ. ಅವರು ಮುಂಬೈನ ಬಿಗಿದಾಳಿಯನ್ನು ಹಿಮ್ಮೆಟ್ಟಿಸಿ 36 ಎಸೆತಗಳಲ್ಲಿ 5 ಬೌಂಡರಿ ಸಮೇತ 48 ರನ್‌ ಗಳಿಸಿದರು.

ಈ ಮೊದಲು ಬ್ಯಾಟ್‌ ಮಾಡಿದ ಮುಂಬೈ ಒಂದು ಹಂತದಲ್ಲಿ ತೀವ್ರವಾಗಿ ಕುಸಿದಿತ್ತು. ಆಗ ಅದನ್ನು ಮೇಲೆತ್ತಿದ್ದು ಸೂರ್ಯಕುಮಾರ್‌. ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಅವರು ಮುಂಬೈ ಮೊತ್ತವನ್ನು ನೂರೈವತ್ತರ ಗಡಿ ದಾಟಿಸುವಲ್ಲಿ ಯಸ್ವಿಯಾದರು.
ಸೂರ್ಯಕುಮಾರ್‌ 37 ಎಸೆತಗಳಿಂದ ಅಜೇಯ 68 ರನ್‌ ಬಾರಿಸಿದರು. 6 ಪ್ರಚಂಡ ಸಿಕ್ಸರ್‌, 5 ಬೌಂಡರಿ ಮೂಲಕ ಸಿಡಿದು ನಿಂತರು. ಇದು ಅವರ ಸತತ 2ನೇ ಅರ್ಧಶತಕ.

ಸೂರ್ಯಕುಮಾರ್‌ಗೆ ಜೈದೇವ್‌ ಉನಾದ್ಕಟ್‌ ಉತ್ತಮ ಬೆಂಬಲ ನೀಡಿದರು (ಅಜೇಯ 13). ಈ ಜೋಡಿ ಮುರಿಯದ 7ನೇ ವಿಕೆಟಿಗೆ 41 ಎಸೆತಗಳಿಂದ 72 ರನ್‌ ರಾಶಿ ಹಾಕಿತು. ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿಗೆ ಒಂದೇ ಒಂದು ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ.

ಪವರ್‌ ಪ್ಲೇಯಲ್ಲಿ ನೋಲಾಸ್‌ 49 ರನ್‌ ಮಾಡಿದ ಮುಂಬೈ, ಮಿಡ್ಲ್ ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಕೇವಲ 43 ರನ್‌ ಗಳಿಸಿತ್ತು. ಡೆತ್‌ ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 59 ರನ್‌ ಬಾರಿಸಿ ಪಂದ್ಯಕ್ಕೆ ಮರಳಿತು. ಸೂರ್ಯಕುಮಾರ್‌ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು.

ಪವರ್‌ ಪ್ಲೇ ಯಶಸ್ಸು: ಪವರ್‌ ಪ್ಲೇ ತನಕ ಮುಂಬೈ ಬ್ಯಾಟಿಂಗ್‌ ಚೆನ್ನಾಗಿಯೇ ಇತ್ತು. ಆದರೆ ಅನಂತರ ಒಮ್ಮೆಲೇ ಪವರ್‌ ಕಳೆದುಕೊಂಡಿತು. ಒಂದರ ಹಿಂದೊಂದರಂತೆ ವಿಕೆಟ್‌ ಉರುಳುತ್ತ ಹೋದವು. ರೋಹಿತ್‌ ಶರ್ಮ-ಇಶಾನ್‌ ಕಿಶನ್‌ ಸೇರಿಕೊಂಡು ಪವರ್‌ ಪ್ಲೇ ಅವಧಿಯನ್ನು ಭರವಸೆಯಿಂದಲೇ ನಿಭಾಯಿಸಿದರು. ವಿಕೆಟ್‌ ನಷ್ಟವಿಲ್ಲದೆ 49 ರನ್‌ ಒಟ್ಟುಗೂಡಿತು. ವಿಲ್ಲಿ, ಸಿರಾಜ್‌, ಹಸರಂಗ ಮತ್ತು ಆಕಾಶ್‌ ದೀಪ್‌ ಈ ಜೋಡಿಯನ್ನು ಬೇರ್ಪಡಿಸಲು ವಿಫ‌ಲರಾದರು. ಇವರಲ್ಲಿ ಹಸರಂಗ ತುಸು ಹೆಚ್ಚೇ ದಂಡಿಸಿಕೊಂಡರು.

ಪವರ್‌ ಪ್ಲೇ ಮುಗಿದೊಡನೆ ಹರ್ಷಲ್‌ ಪಟೇಲ್‌ ದಾಳಿಗೆ ಇಳಿದರು. ದ್ವಿತೀಯ ಎಸೆತದಲ್ಲೇ ರೋಹಿತ್‌ ಶರ್ಮ ಅವರನ್ನು ಕಾಟ್‌ ಆ್ಯಂಡ್‌ ಬೌಲ್ಡ್‌ ಮೂಲಕ ವಾಪಸ್‌ ಕಳುಹಿಸಿದರು. ರೋಹಿತ್‌ ಗಳಿಕೆ 15 ಎಸೆತಗಳಿಂದ 26 ರನ್‌ (4 ಬೌಂಡರಿ, 1 ಸಿಕ್ಸರ್‌).

9ನೇ ಓವರ್‌ನಲ್ಲಿ ಹಸರಂಗ ದ್ವಿತೀಯ ಬ್ರೇಕ್‌ ಒದಗಿಸಿದರು. “ಮರಿ ಎಬಿಡಿ’ ಡಿವಾಲ್ಡ್‌ (8) ಬ್ರೆವಿಸ್‌ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಅನಂತರದ ಓವರ್‌ನಲ್ಲಿ ಆಕಾಶ್‌ ದೀಪ್‌ ಮುಂಬೈಗೆ ಬಲವಾದ ಆಘಾತವಿಕ್ಕಿದರು. ದ್ವಿತೀಯ ಎಸೆತದಲ್ಲಿ ಇಶಾನ್‌ ಕಿಶನ್‌ ವಿಕೆಟ್‌ ಕಿತ್ತರು. 5ನೇ ಎಸೆತದಲ್ಲಿ ತಿಲಕ್‌ ವರ್ಮ ರನೌಟಾದರು. ರೋಹಿತ್‌ ಅವರಂತೆ ಇಶಾನ್‌ ಕಿಶನ್‌ ಗಳಿಕೆಯೂ 26 ರನ್‌ (28 ಎಸೆತ, 3 ಬೌಂಡರಿ). ಹಿಂದಿನ ಪಂದ್ಯಗಳಲ್ಲಿ ಮಿಂಚಿದ ತಿಲಕ್‌ ಇಲ್ಲಿ ಖಾತೆ ತೆರೆಯುವ ಮೊದಲೇ ರನೌಟ್‌ ಸಂಕಟಕ್ಕೆ ಸಿಲುಕಿದರು. ಮ್ಯಾಕ್ಸ್‌ವೆಲ್‌ ಅವರ ಡೈವಿಂಗ್‌ ಹಿಟ್‌ ಇಲ್ಲಿ ಮ್ಯಾಜಿಕ್‌ ಮಾಡಿತ್ತು. 10 ಓವರ್‌ ಮುಕ್ತಾಯಕ್ಕೆ ಮುಂಬೈ 62 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಕೈರನ್‌ ಪೊಲಾರ್ಡ್‌ ಅವರನ್ನು ಗೋಲ್ಡನ್‌ ಡಕ್‌ಗೆ ಕೆಡವಿದ ಹಸರಂಗ ಆರ್‌ಸಿಬಿಗೆ ಬಿಗ್‌ ವಿಕೆಟ್‌ ಒಂದನ್ನು ತಂದಿತ್ತರು. ಮೊದಲ ಸಲ ಆಡಲಿಳಿದ ರಮಣ್‌ದೀಪ್‌ ಕ್ಲಿಕ್‌ ಆಗಲಿಲ್ಲ. ಆರೇ ರನ್ನಿಗೆ ಆಟ ಮುಗಿಸಿದರು. 15 ಓವರ್‌ ಮುಕ್ತಾಯಕ್ಕೆ ಮುಂಬೈ 92 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟದಲ್ಲಿತ್ತು. ಈ ಹಂತದಲ್ಲಿ ಜತೆಗೂಡಿದ ಸೂರ್ಯಕುಮಾರ್‌ ಯಾದವ್‌-ಜೈದೇವ್‌ ಉನಾದ್ಕಟ್‌ ಸೇರಿಕೊಂಡು ತಂಡವನ್ನು ದೊಡ್ಡ ಕುಸಿತದಿಂದ ಪಾರುಮಾಡಿದರು.

ಆರ್‌ಸಿಬಿ ಬೌಲಿಂಗ್‌ ಆಕ್ರಮಣದ ವೇಳೆ ಮೊಹಮ್ಮದ್‌ ಸಿರಾಜ್‌ ದುಬಾರಿಯಾಗಿ ಗೋಚರಿಸಿದರು. ಇವರ 4 ಓವರ್‌ನಲ್ಲಿ 51 ರನ್‌ ಸೋರಿ ಹೋಯಿತು. ಡೇವಿಡ್‌ ವಿಲ್ಲಿ 2 ಓವರ್‌ಗಳಲ್ಲಿ ಕೇವಲ ಎಂಟೇ ರನ್‌ ನೀಡಿದರೂ ಇವರಿಗೆ ಪೂರ್ತಿ ಕೋಟಾ ನೀಡದಿದ್ದುದು ಅಚ್ಚರಿಯಾಗಿ ಕಂಡಿತು.

ಸಂಕ್ಷಿಪ್ತ ಸ್ಕೋರು:
ಮುಂಬೈ 20 ಓವರ್‌, 151/6
(ಸೂರ್ಯಕುಮಾರ್‌ 68, ರೋಹಿತ್‌ 26, ವನಿಂದು ಹಸರಂಗ 28ಕ್ಕೆ 2).
ಬೆಂಗಳೂರು 18.3 ಓವರ್‌, 152/3
(ಅನುಜ್‌ ರಾವತ್‌ 66, ಕೊಹ್ಲಿ 48, ಉನಾದ್ಕಟ್‌ 30ಕ್ಕೆ 1).

By dtv

Leave a Reply

Your email address will not be published. Required fields are marked *

error: Content is protected !!