ರಾಜಸ್ಥಾನ : ಕುಟುಂಬದವರೆಲ್ಲರು ಸೇರಿ ಕುಲದೇವಿಯ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿದ್ದು , ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಜೋಧಪುರ – ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಚುರು ನಿವಾಸಿಗಳಾದ ವಿಜಯ್ ಸಿಂಗ್ , ಉದಯ್ ಪ್ರತಾಪ್ ಸಿಂಗ್ , ಮಂಜು ಕನ್ವರ್ , ಪ್ರವೀಣ್ ಸಿಂಗ್ , ದರ್ಪಣ್ ಸಿಂಗ್ ಮತ್ತು ಮಧುಕಂವರ್ ಅಪಘಾಥದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ . ಚುರು ಗ್ರಾಮದ ನಿವಾಸಿಗಳು ನಾಗಣಾ ಕುಲದೇವಿಯ ದರ್ಶನಕ್ಕೆ ಹೋಗುತ್ತಿದ್ದರು.
ಬಿಲಾರ ಸಮೀಪದ ಜುರ್ಲಿ ಫಾಂಟಾ ಬಳಿ ರಾತ್ರಿ ಒಂದು ಗಂಟೆ ಸುಮಾರಿಗೆ ಟ್ರಕ್ ಹಿಂಬದಿಗೆ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೊಲೆರೋನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದು , ಮೂವರು ಗಾಯಗೊಂಡಿದ್ದರು . ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಬಿಲಾಡ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಿಲಾರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಕೂಡ ಎಂಡಿಎಂ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಸಂಜು ಕನ್ವರ್ ಮತ್ತು ಪವನ್ ಸಿಂಗ್‌ರನ್ನು ಜೋಧಪುರಕ್ಕೆ ಶಿಫಾರಸು ಮಾಡಲಾಗಿದ್ದು , ಚೈನ್ ಸಿಂಗ್‌ಗೆ ಬಿಲಾರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.