ಹುಬ್ಬಳ್ಳಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬ ಪೋಸ್ಟ್ ಮಾಡಿದ್ದ ಹಿನ್ನೆಲೆ ಹುಬ್ಬಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ, ಫೋಟೋ ಎಡಿಟ್ ಮಾಡಿ ಯುವಕನೋರ್ವ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದನು. ಈ ವಿವಾದಿತ ಪೋಸ್ಟ್ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕರು ಆಸ್ಪತ್ರೆ, ಬಸ್, ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ದುಷ್ಕರ್ಮಿಗಳು ಹುಬ್ಬಳ್ಳಿಯ ದಿಡ್ಡಿ ಓಣಿಯ ಗುರು ಆಸ್ಪತ್ರೆ ಧ್ವಂಸಗೊಳಿಸಿದ್ದಾರೆ. ಅಲ್ಲದೇ ಬಸ್‍ಗಳ ಮೇಲೆ ಕೂಡ ಕಲ್ಲು ತೂರಾಟ ನಡೆಸಿದ್ದಾರೆ. ಉಪ ನಗರ ಠಾಣೆ ಇನ್ಸ್‍ಪೆಕ್ಟರ್ ವಾಹನ ಜಖಂಗೊಳಿಸಿದ್ದಾರೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪೂರ್ವ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಕಾಡದೇವರ ಮಠ ತಲೆಗೆ ಗಾಯಗೊಂಡಿದ್ದು, ವಿವಾದಿತ ಫೋಟೋ ಪೋಸ್ಟ್ ಮಾಡಿದ್ದ ಹಿಂದೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹುಬ್ಬಳ್ಳಿ ನಗರಾದ್ಯಂತ ಪೊಲೀಸ್ ಆಯುಕ್ತ ಲಾಬೂರಾಮ್ ಕಲಂ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹಳೇ ಹುಬ್ಬಳ್ಳಿ ನಿವಾಸಿಗಳು ಗಲಾಟೆ ಮಾಡಿದವರು ನಮ್ಮ ಏರಿಯಾದವರಲ್ಲ. ನಾವು ಇಲ್ಲಿ ಅವರನ್ನು ನೋಡಿಯೇ ಇಲ್ಲ. ಕೆಲವರು ಕೇಸರಿ, ಕೆಲವರು ಹಸಿರು, ಕೆಲವರು ನೀಲಿ ಧ್ವಜ ಹಿಡಿದಿದ್ದರು. ಏಕಾಏಕಿ ಗಲಾಟೆ ಆರಂಭವಾಯಿತು. ನಂತರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಆರೋಪಿಯು ಮಸೀದಿಯ ಚಿತ್ರದ ಮೇಲೆ ಕೇಸರಿ ಧ್ವಜ ಹಾಕಿದ್ದಲ್ಲದೆ “ತಲೆ ಕೆಟ್ಟರೆ ಇಲ್ಲಿಯೂ ಭಗವಧ್ವಜ ಹಾರಿಸುವೆ, ಜೈ ಶ್ರೀರಾಮ್, ಜೈ ಹಿಂದೂ ಸಾಮ್ರಾಟ್” ಎಂದು ಬರೆದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದ ಎನ್ನಲಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಆರೋಪಿ ಅಭಿಷೇಕ್ ಹೀರೆಮಠನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ. “ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು ಕಳವಳಕಾರಿಯಾಗಿವೆ. ಕಿಡಿಗೇಡಿ, ತಿಳಿಗೇಡಿ ಯುವಕನ ಕೃತ್ಯದಿಂದ ಇನ್ನೊಂದು ಸಮುದಾಯದ ಕೆಲವರು ರಾತ್ರಿಯೆಲ್ಲ ಹುಬ್ಬಳ್ಳಿಯಲ್ಲಿ ಬೀಭತ್ಸ ಸೃಷ್ಟಿಸಿ ದ್ವೇಷದ ಬೆಂಕಿಗೆ ಪೆಟ್ರೋಲ್ ಸುರಿಯದೇ ಸಹನೆ ಮೆರಯಬೇಕಿತ್ತು” ಎಂದಿದ್ದಾರೆ.
ಘಟನೆ ಕುರಿತು ಹುಬ್ಬಳ್ಳಿ ಪೊಲೀಸ್ ಕಮಿಷನರ್ ಲಾಭೂರಾಮ್ ಮಾತನಾಡಿ “ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಆದರೆ ನಿನ್ನೆ ರಾತ್ರಿ ಮಾತುಕತೆ ವೇಳೆ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದು ಸರಿಯಲ್ಲ. ಈ ಕೃತ್ಯದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಜನರು ಶಾಂತಿ ಕಾಪಾಡಬೇಕೆಂದು” ಮನವಿ ಮಾಡಿದ್ದಾರೆ.
ನಮ್ಮ ಸಮುದಾಯ ದವರಲ್ಲಿ ಒಂದು ವಿನಂತಿ. ನಮ್ಮ ದೇಶದಲ್ಲಿ ಕಾನೂನು ಇದೆ. ಈ ತರ ಪೋಸ್ಟ್ ನೋಡಿದರೆ ಪೋಲೀಸ್ ಕಂಪ್ಲೈಂಟ್ ಮಾಡಿ. ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದು, ಪೊಲೀಸರ ಮೇಲೆ ಹಲ್ಲೆ ಮಾಡುವುದು ಸರಿ ಅಲ್ಲ. ನ್ಯಾಯವಾಗಿ ಹೋರಾಟ ಮಾಡುವ.