dtvkannada

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು ಏಳು ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿದೆ.
ಟೂರ್ನಿ ಆರಂಭದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಹೈದರಾಬಾದ್ ಬಳಿಕದ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಇನ್ನೊಂದೆಡೆ ಪಂಜಾಬ್ ತಂಡವು ಆಡಿರುವ ಆರು ಪಂದ್ಯಗಳಲ್ಲಿ ಮೂರನೇ ಸೋಲಿಗೆ ಶರಣಾಗಿದೆ. 
ನಾಯಕ ಮಯಂಕ್ ಅಗರವಾಲ್ ಅನುಪಸ್ಥಿತಿಯು ಪಂಜಾಬ್‌ಗೆ ಕಾಡಿತ್ತು. ಉಮ್ರಾನ್ ಮಲಿಕ್ (28ಕ್ಕೆ 4 ವಿಕೆಟ್) ಹಾಗೂ ಭುವನೇಶ್ವರ್ ಕುಮಾರ್ (22ಕ್ಕೆ 3 ವಿಕೆಟ್) ದಾಳಿಗೆ ನಲುಗಿದ ಪಂಜಾಬ್, ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಅರ್ಧಶತಕದ (60) ಹೊರತಾಗಿಯೂ 151 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 
ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಇನ್ನೂ ಏಳು ಎಸೆತಗಳು ಬಾಕಿ ಉಳಿದಿರುವಂತೆಯೇ 18.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ನಾಯಕ ಕೇನ್ ವಿಲಿಯಮ್ಸನ್ (3) ವಿಕೆಟ್ ಬೇಗನೆ ನಷ್ಟವಾದರೂ ಅಭಿಷೇಕ್ ಶರ್ಮಾ (31), ರಾಹುಲ್ ತ್ರಿಪಾಠಿ (34), ಏಡನ್ ಮಾರ್ಕರಮ್ (41) ಹಾಗೂ ನಿಕೋಲಸ್ ಪೂರನ್ (35) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಪೈಕಿ ಏಡನ್ ಹಾಗೂ ಪೂರನ್ ಮುರಿಯದ ನಾಲ್ಕನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಪಂಜಾಬ್ ಪರ ರಾಹುಲ್ ಚಾಹರ್ ಎರಡು ವಿಕೆಟ್ ಕಬಳಿಸಿದರು.

View this post on Instagram

A post shared by Punjab Kings (@punjabkingsipl)

ಉಮ್ರಾನ್ ಮಲಿಕ್ ದಾಖಲೆ : ಐಪಿಎಲ್ ಸೀಸನ್ 15 ರ (IPL 2022) 27ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಕೊನೆಯ ಓವರ್ ಮೂಲಕ ಎಂಬುದು ವಿಶೇಷ. ಪಂಜಾಬ್ ಕಿಂಗ್ಸ್ ವಿರುದ್ದ ನಡೆದ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಉಮ್ರಾನ್ 28 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ವಿಶೇಷ ಎಂದರೆ ಮೂರು ಓವರ್ನಲ್ಲಿ 28 ರನ್ ನೀಡಿದ್ದ ಮಲಿಕ್ ಕೊನೆಯ ಓವರ್ನಲ್ಲಿ ಒಂದೇ ಒಂದು ರನ್ ನೀಡಿರಲಿಲ್ಲ. ಅಲ್ಲದೆ ಮೂರು ವಿಕೆಟ್ ಪಡೆಯುವ ಮೂಲಕ ಮೇಡನ್ ಓವರ್ ಎಸೆದಿದ್ದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 20ನೇ ಓವರ್ ಮೇಡನ್ ಎಸೆದ 4ನೇ ಬೌಲರ್ ಎನಿಸಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ಇದುವರೆಗೆ ಕೇವಲ ಇಬ್ಬರು ಬೌಲರ್​ಗಳು ಮಾತ್ರ 20ನೇ ಓವರ್​ನಲ್ಲಿ ಯಾವುದೇ ರನ್​ ನೀಡದೆ ಮೇಡನ್ ಮಾಡಿದ್ದರು. ಈ ದಾಖಲೆ ಬರೆದ ಮೊದಲ ಬೌಲರ್ ಇರ್ಫಾನ್ ಪಠಾಣ್. 2008 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದ ಇರ್ಫಾನ್ ಪಠಾಣ್ ಕೊನೆಯ ಓವರ್​ ಅನ್ನು ಮೇಡನ್ ಮಾಡುವ ಮೂಲಕ ವಿಶೇಷ ದಾಖಲೆ ಬರೆದಿದ್ದರು. ಇದಾದ ಬಳಿಕ 2009 ರಲ್ಲಿ ಲಸಿತ್ ಮಾಲಿಂಗ ಡೆಕ್ಕನ್ ಚಾರ್ಜರ್ಸ್​ ವಿರುದ್ದ ಕೊನೆಯ ಓವರ್ ಮೇಡನ್ ಮಾಡಿದ್ದರು. ಹಾಗೆಯೇ 2017 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡದ ವೇಗಿ ಜಯದೇವ್ ಉನದ್ಕತ್ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಕೊನೆಯ ಓವರ್​ ಅನ್ನು ಮೇಡನ್ ಓವರ್ ಮಾಡಿ ಈ ದಾಖಲೆಯನ್ನು ಸರಿಗಟ್ಟಿದ್ದರು.

ಇದೀಗ ಐಪಿಎಲ್ ಇತಿಹಾಸದಲ್ಲಿ 20ನೇ ಓವರ್ ಮೇಡನ್ ಎಸೆದ 4ನೇ ಬೌಲರ್ ಆಗಿ ಉಮ್ರಾನ್ ಮಲಿಕ್ ಹೊರಹೊಮ್ಮಿದ್ದಾರೆ. ತಮ್ಮ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಉಮ್ರಾನ್ ಯಾವುದೇ ರನ್ ನೀಡಿರಲಿಲ್ಲ. 2ನೇ ಎಸೆತದಲ್ಲಿ ಒಡಿಯನ್ ಸ್ಮಿತ್ ಅವರ ವಿಕೆಟ್ ಪಡೆದರು. ಮೂರನೇ ಎಸೆತದಲ್ಲಿ ಯಾವುದೇ ರನ್​ ಇಲ್ಲ. ನಾಲ್ಕನೇ ಎಸೆತದಲ್ಲಿ ರಾಹುಲ್ ಚಹರ್ ಅವರನ್ನು ಬೌಲ್ಡ್ ಮಾಡಿದ್ದರು. ಐದನೇ ಎಸೆತದಲ್ಲಿ ವೈಭವ್ ಅರೋರ ಕೂಡ ಕ್ಲೀನ್ ಬೌಲ್ಡ್ ಆಗಿದ್ದರು. 6ನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ರನೌಟ್ ಆಗಿದ್ದರು. ಇದರೊಂದಿಗೆ ಐಪಿಎಲ್ ಪಂದ್ಯದ ಕೊನೆಯ ಓವರ್​ನಲ್ಲಿ ಮೇಡನ್ ಓವರ್ ಎಸೆದ 4ನೇ ಬೌಲರ್ ಹಾಗೂ ಅತೀ ಕಿರಿಯ ವೇಗಿ ಎಂಬ ದಾಖಲೆಯನ್ನು ಉಮ್ರಾನ್ ಮಲಿಕ್ ತಮ್ಮದಾಗಿಸಿಕೊಂಡರು.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ತಮ್ಮದೇ ಬೌಲಿಂಗ್​ನಲ್ಲಿ ಜೀತೇಶ್ ಶರ್ಮಾ ಹಾಗೂ ಓಡಿಯನ್ ಸ್ಮಿತ್ ಅವರ ಕ್ಯಾಚ್ ಹಿಡಿಯುವ ಮೂಲಕ ಐಪಿಎಲ್​ನ ಒಂದೇ ಪಂದ್ಯದಲ್ಲಿ 2 ಕಾಟ್ ಅ್ಯಂಡ್ ಬೌಲ್ಡ್ ಮಾಡಿದ 2ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಹರ್ಭಜನ್ ಸಿಂಗ್ 2011 ರಲ್ಲಿ ಸಿಎಸ್​ಕೆ ವಿರುದ್ದ ತಮ್ಮದೇ ಬೌಲಿಂಗ್​ನಲ್ಲಿ 2 ಕ್ಯಾಚ್ ಹಿಡಿದು ಈ ವಿಶೇಷ ದಾಖಲೆ ಬರೆದಿದ್ದರು. ಇದೀಗ ಉಮ್ರಾನ್ ಮಲಿಕ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

ಐಪಿಎಲ್​ನಲ್ಲಿ ವೇಗದ ದಾಖಲೆ:
ಐಪಿಎಲ್​ನ 17ನೇ ಪಂದ್ಯದಲ್ಲಿ ಸಿಎಸ್​ಕೆ ವಿರುದ್ದ ಉಮ್ರಾನ್ ಮಲಿಕ್ 153.1 ಕಿ.ಮೀ ವೇಗದಲ್ಲಿ ಎಸೆದಿದ್ದರು. ವಿಶೇಷ ಎಂದರೆ ಐಪಿಎಲ್​ ಇತಿಹಾಸದಲ್ಲಿ ಇಷ್ಟೊಂದು ವೇಗದಲ್ಲಿ ಯಾವುದೇ ಭಾರತೀಯ ಬೌಲರ್ ಚೆಂಡೆಸೆದಿಲ್ಲ. ಅಂದರೆ ಐಪಿಎಲ್​ನಲ್ಲಿ ಅತ್ಯಂತ ವೇಗವಾಗಿ ಬೌಲ್ ಮಾಡಿದ ಭಾರತೀಯ ಬೌಲರ್ ಎಂಬ ದಾಖಲೆ ಇದೀಗ ಉಮ್ರಾನ್ ಮಲಿಕ್ ಪಾಲಾಗಿದೆ. ಈ ಹಿಂದೆ ಈ ದಾಖಲೆ 152.85 ಕಿ.ಮೀ ವೇಗದಲ್ಲಿ ಚೆಂಡೆಸೆದ ನವದೀಪ್ ಸೈನಿ ಹೆಸರಿನಲ್ಲಿತ್ತು. ಇದೀಗ 153.1 ಕಿ.ಮೀ ವೇಗದಲ್ಲಿ ಬೌಲ್ ಮಾಡಿ ಉಮ್ರಾನ್ ಮಲಿಕ್ ಇತಿಹಾಸ ರಚಿಸಿದ್ದಾರೆ.

ಅಷ್ಟೇ ಅಲ್ಲದೆ ಸತತ 145ರ ಅಸುಪಾಸಿನಲ್ಲಿ ಚೆಂಡೆಸೆಯುವ ಮೂಲಕ ಉಮ್ರಾನ್ ಮಲಿಕ್ ಈ ಬಾರಿಯ ಐಪಿಎಲ್​ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಇದಾಗ್ಯೂ ಐಪಿಎಲ್​ನಲ್ಲಿನ ಅತ್ಯಂತ ವೇಗದ ಚೆಂಡೆಸೆದ ದಾಖಲೆಯನ್ನು ಉಮ್ರಾನ್​ಗೆ ಮುರಿಯಲಾಗಲಿಲ್ಲ. ಇನ್ನು ಹಲವು ಪಂದ್ಯಗಳಿದ್ದು 22 ರ ಯುವ ವೇಗದ ಬೌಲರ್ ಅತೀ ವೇಗವಾಗಿ ಬೌಲ್ ಮಾಡಿದ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.

ಅಂದಹಾಗೆ ಐಪಿಎಲ್ನಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಶಾನ್ ಟೈಟ್ 2011 ರಲ್ಲಿ ಡೆಲ್ಲಿ ವಿರುದ್ದ 157.71 kmph ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದಿದ್ದರು. ಇನ್ನು 2ನೇ ಸ್ಥಾನದಲ್ಲಿ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಅನ್ರಿಕ್ ನಾರ್ಕಿಯಾ ಇದ್ದಾರೆ. ನಾರ್ಕಿಯಾ ಕಳೆದ ಸೀಸನ್ ಐಪಿಎಲ್ನಲ್ಲಿ 156.22 kmph, 155.21 kmph, 154.74 kmph ವೇಗದಲ್ಲಿ ಬೌಲ್ ಮಾಡಿದ ದಾಖಲೆ ಬರೆದಿದ್ದರು. ಇನ್ನು ಮೂರನೇ ಸ್ಥಾನದಲ್ಲಿ ಡೇಲ್ ಸ್ಟೈನ್ (154.4 kmph) ಹಾಗೂ ನಾಲ್ಕನೇ ಸ್ಥಾನದಲ್ಲಿ ಕಗಿಸೊ ರಬಾಡ (154.2 kmph) ಇದ್ದಾರೆ. ಇದೀಗ ಉಮ್ರಾನ್ ಮಲಿಕ್ 153.1 ಕಿ.ಮೀ ವೇಗದಲ್ಲಿ ಚೆಂಡೆಸೆದು ವೇಗದ ಸರದಾರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!