dtvkannada

ಬೆಂಗಳೂರು: ನಗರದ ಮನೆ ಮಾಲೀಕರೊಬ್ಬರು ಗೇಟ್ಗೆ ತೂಗು ಹಾಕಿರುವ ಫಲಕದ ಚಿತ್ರ ವೈರಲ್ ಆಗಿದೆ. ‘ಅನಿವಾರ್ಯ ಎನಿಸಿದಾಗ ಶರೀರದ ಅಂಗಾಂಗಳನ್ನು ಮಾರಿಕೊಂಡು ಜೀವನ ಮಾಡಬಹುದು. ಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ. ಮನೆ ಖಾಲಿಯಿದೆ, ಹಿಂದೂಗಳಿಗೆ ಮಾತ್ರ’ ಎಂದು ದಯಾನಂದ ಎನ್ನುವವರು ಫಲಕ ಹಾಕಿ, ಅದರ ಕೆಳಗೆ ತಮ್ಮ ನಂಬರ್ ಸಹ ಬರೆದಿದ್ದಾರೆ. ಹೇಟ್ ವಾಚ್ ಕರ್ನಾಟಕ ಟ್ವಿಟರ್ ಅಕೌಂಟ್ ಈ ಚಿತ್ರವನ್ನು ಟ್ವೀಟ್ ಮಾಡಿದೆ. ಇದನ್ನು ರಿಟ್ವೀಟ್ ಮಾಡಿರುವ ಅಶೋಕ್ ಸ್ವೇನ್ ಎನ್ನುವವರು ‘ಭಾರತದ ಸಿಲಿಕಾನ್ ವ್ಯಾಲಿ ಎನ್ನಲಾಗುವ ಬೆಂಗಳೂರು’ ಎಂದು ವಿಷಾದದ ದನಿಯ ಒಕ್ಕಣೆ ಬರೆದಿದ್ದಾರೆ.

‘ಹೇಟ್ ​ವಾಚ್​ ಕರ್ನಾಟಕ’ ಹಂಚಿಕೊಂಡಿರುವ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಹಲವರು, ‘ದೇವರು ಅವರ ಕೋರಿಕೆ ಒಪ್ಪಿಕೊಳ್ಳಲಿ’ (ಅಂಗಾಂಗ ಮಾರಿಕೊಳ್ಳುವ ಸ್ಥಿತಿ ಬರಲಿ) ಎಂದು ಹಾರೈಸಿದ್ದಾರೆ. ರಾಜನ್ ಎನ್ನುವವರಂತೂ, ‘ಎಂಥ ಬುದ್ಧಿವಂತ ಮನುಷ್ಯ. ಒಂದು ವೇಳೆ ಈ ಮನುಷ್ಯನ ಆರೋಗ್ಯ ಹಾಳಾದರೆ ವೈದ್ಯರು ಇವನಿಗೆ ಕೊಡುವ ರಕ್ತ ಮತ್ತು ಅಂಗಾಂಗಳು ಸಂಪೂರ್ಣ ಹಿಂದೂ ಧರ್ಮಕ್ಕೆ ಸೇರಿದವನದ್ದೇ ಆಗಿವೆ ಎಂದು ಖಾತ್ರಿಪಡಿಸಿಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

‘ನಿಮ್ಮ ಅಂಗಾಂಗ ಮಾರಿಕೊಳ್ಳುವ ಪರಿಸ್ಥಿತಿ ಎಂದಿಗೂ ಬರದಿರಲಿ’ ಎಂದು ಸೈಯದ್ ನೈಮತುಲ್ಲಾ ಫಯಾಜ್ ಎನ್ನುವವರು ಹಾರೈಸಿದಿದ್ದಾರೆ. ‘ನಿಮಗೆ ಇಷ್ಟವಾಗುವಂಥ ಬಾಡಿಗೆದಾರರೇ ನಿಮಗೆ ಸಿಗಲಿ. ಅಂಗಾಂಗ ಮಾರಿಕೊಳ್ಳುವ ಪರಿಸ್ಥಿತಿ ನಿಮಗೆ ಬರುವುದು ಬೇಡ. (ಮಾನಸಿಕವಾಗಿ) ಬೇಗ ಹುಷಾರಾಗಿ’ ಎಂದು ಹಾರೈಸಿದ್ದಾರೆ.

ಸಮಾಜದಲ್ಲಿ ಪರಧರ್ಮದ ಬಗ್ಗೆ ದ್ವೇಷದ ಮನೋಭಾವ ಮೊದಲಿನಿಂದಲೂ ಇತ್ತೋ, ಈಗಷ್ಟೇ ಹೆಚ್ಚಾಗಿದೆಯೋ ಎನ್ನುವ ಬಗ್ಗೆಯೂ ಇದೇ ಟ್ವೀಟ್​ ನೆಪದಲ್ಲಿ ಚರ್ಚೆ ನಡೆದಿದೆ. ‘ಎಂಥ ಕಾಲ ಬಂತು. ಹಿಂದೂಗಳಲ್ಲಿ ಈ ಮಟ್ಟದ ದ್ವೇಷ ತುಂಬಿಕೊಳ್ಳುತ್ತದೆ ಎಂದು ಊಹಿಸಲೂ ಆಗುತ್ತಿಲ್ಲ’ ಎಂದು ರಮೇಶ್ ಹೇಳಿದ್ದಾರೆ. ‘ಮೊದಲಿನಿಂದಲೂ ಇಂಥ ಮನೋಭಾವ ಇತ್ತು. ಆದರೆ ಅದನ್ನು ಯಾರೂ ಹೀಗೆ ತೋರಿಸುತ್ತಿರಲಿಲ್ಲ. ಬಿಜೆಪಿ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ’ ಎಂದು ಹರ್ಷ ಮತ್ತು ಪ್ರದೀಪ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.

ಫಲಕದಲ್ಲಿರುವ ‘ಅಂಗಾಂಗ ಮಾರುತ್ತೇನೆ’ ಎನ್ನುವ ಧಾಟಿಯ ಬರಹಕ್ಕೂ ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಅಂಗಾಂಗಗಳನ್ನು ಮಾರಿಕೊಳ್ಳಬಾರದು. ದಾನ ಕೊಡಬೇಕು’ ಎಂದು ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!