10ನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಅವನ ಬಳಿ ತಮ್ಮ ಕಾಲು ನೆಕ್ಕಿಸಿಕೊಂಡ ಸುಮಾರು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ವಿದ್ಯಾರ್ಥಿ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದು, ಬಂಧಿತರು ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆತನಿಗೆ ಹೊಡೆದ ಮತ್ತು ಬಲವಂತವಾಗಿ ಪಾದವನ್ನು ನೆಕ್ಕಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ನೋಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವತಃ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಐವರ ಪೊಲೀಸ್ ಸಿಬ್ಬಂದಿಯ ತಂಡವೊಂದನ್ನು ರಚಿಸಿದ್ದರು. ಸದ್ಯ ಎಲ್ಲರನ್ನೂ ಬಂಧಿಸಲಾಗಿದೆ.
ಘಟನೆ ನಡೆದದ್ದು ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಆಗಿದ್ದು, ಈ ಬಗ್ಗೆ ಅಲ್ಲಿನ ಎಸ್ಪಿ ಶ್ಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಪ್ರಮುಖ ಆರೋಪಿ ಅಪ್ರಾಪ್ತನಾಗಿದ್ದು, ಅವನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳಿಸಲಾಗಿದೆ. ಇನ್ನುಳಿದ ಆರುಮಂದಿಯ ಹೆಸರು ಅಭಿಷೇಕ್, ವಿಕಾಸ್ ಪಾಸಿ, ಮಹೇಂದ್ರ ಕುಮಾರ್, ಹೃತಿಕ್ ಸಿಂಗ್, ಅಮನ್ ಸಿಂಗ್, ಯಶ್ ಪ್ರತಾಪ್ ಎಂದಾಗಿದ್ದು, ಅವರೆಲ್ಲರೂ 18 ವರ್ಷ ಮೇಲ್ಪಟ್ಟವರು ಎಂದು ಹೇಳಿದ್ದಾರೆ.
10ನೇ ತರಗತಿ ಹುಡುಗ ಯಾವ ಶಾಲೆಯಲ್ಲಿ ಓದುತ್ತಿದ್ದನೋ, ಅದೇ ಶಾಲೆಯಲ್ಲಿ ಕಲಿತವರು ಈ ಆರೋಪಿಗಳು. ಹುಡುಗನ ಬಳಿ ಹಣ ಕೊಡುವಂತೆ ಒತ್ತಾಯಿಸಿದ್ದಾರೆ, ಈತ ಇಲ್ಲ ಎಂದಿದ್ದಕ್ಕೆ ಎಲ್ಲಿಂದಾದರೂ ತಂದುಕೊಡು ಎಂದು ಬಲವಂತ ಮಾಡಿದ್ದಾರೆ. ಆದರೆ ಆತ ಇವರ ಆದೇಶವನ್ನು ಪಾಲಿಸಲಿಲ್ಲ. ಅಷ್ಟಕ್ಕೇ ಸಿಟ್ಟಾದ ಹುಡುಗರು ತೀರ ಅಮಾನವೀಯವಾಗಿ ವಿದ್ಯಾರ್ಥಿಗೆ ಹಿಂಸೆ ಕೊಟ್ಟಿದ್ದಾರೆ. ತಾವು ಹೇಳಿದಂತೆ ಕೇಳುತ್ತಿಲ್ಲ ಎಂಬ ಸಿಟ್ಟಿಗೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಲಿತರ ಮೇಲಿನ ದೌರ್ಜನ್ಯಗಳು ನಿರಂತರ ಎಂಬಂತಾಗಿದೆ. ಅವರನ್ನು ದೇಗುಲಗಳಿಗೇ ಸೇರಿಸದೆ ಇರುವುದು, ದಲಿತರ ಮದುವೆಗಳಲ್ಲಿ ಮೆರವಣಿಗೆಗೆ ಅವಕಾಶ ನೀಡದೆ ಇರುವುದು, ಸಣ್ಣತಪ್ಪಿಗೂ ಹಿಗ್ಗಾಮುಗ್ಗಾ ಥಳಿಸುವುದು, ಮರಕ್ಕೆ ಕಟ್ಟಿಹಾಕಿ ಹಿಂಸಿಸುವಂಥ ಘಟನೆಗಳು ದೇಶದಲ್ಲಿ ಅನೇಕ ಕಡೆಗಳಲ್ಲಿ ನಡೆಯುತ್ತಿರುತ್ತದೆ.